ಮೂಡಿಗೆರೆ ಪಟ್ಟಣದ ಸಮೀಪ ಹಳಸೆ ಗ್ರಾಮದಲ್ಲಿರುವ “ದಿ ಕಾಫಿ ಕೋರ್ಟ್” ಕ್ಲಬ್ ನಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಕ್ರೀಡಾ ಸಂಕೀರ್ಣವನ್ನು ಭಾನುವಾರ ಉದ್ಘಾಟಿಸಲಾಯಿತು.
ಮೂಡಬಿದರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ಡಾ. ಮೋಹನ್ ಆಳ್ವ ಅವರು ಕ್ರೀಡಾ ಸಂಕಿರ್ಣದ ಉದ್ಘಾಟನೆ ನೆರವೇರಿಸಿ ಮಾತನಾಡಿ ಕ್ರೀಡಾ ಚಟುವಟಿಕೆಗಳು ಮಾನವನ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಗೆ ಬಹಳ ಸಹಕಾರಿಯಾಗಿದೆ, ಇಂದಿನ ಆಧುನಿಕ ಯುಗದಲ್ಲಿ ಅತಿಯಾದ ಒತ್ತಡ ದಿಂದ ಅನೇಕ ಆರೋಗ್ಯ ಸಮಸ್ಯೆಗಳು ಜನರನ್ನು ಕಾಡುತ್ತಿದ್ದು ನಾವು ನಮ್ಮ ಆರೋಗ್ಯದ ಕಡೆಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಸಲಹೆ ನೀಡಿದರು. ಈ ನಿಟ್ಟಿನಲ್ಲಿ ಕಾಫಿ ಕೋರ್ಟ್ ಆವರಣದಲ್ಲಿ ಕ್ರೀಡಾ ಸಂಕೀರ್ಣ ನಿರ್ಮಾಣ ಮಾಡಿರುವುದು ಒಂದು ಅತ್ಯುತ್ತಮ ಕಾರ್ಯ. ಈ ಕ್ರೀಡಾ ಸಂಕೀರ್ಣವನ್ನು ಸದಸ್ಯರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಂಸದ ಕೋಟ ಶ್ರೀನಿವಾಸ ಪೂಜಾರಿಯವರು ಕಾಫಿಕೋರ್ಟ್ ನ ಕಿರು ಹೊತ್ತಿಗೆಯನ್ನು ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಉಪಸಭಾಪತಿ ಎಂ ಕೆ ಪ್ರಾಣೇಶ್, ವಿಧಾನ ಪರಿಷತ್ ಸದಸ್ಯರಾದ ಸಿ ಟಿ ರವಿ, ಮಾಜಿ ಸಚಿವೆ ಶ್ರೀಮತಿ ಮೋಟಮ್ಮ, ಮಾಜಿ ಸಭಾಪತಿ ಬಿ.ಎಲ್. ಶಂಕರ್, ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ ದಿನೇಶ್ ದೇವರುಂದ, ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಹಳಸೆ ಶಿವಣ್ಣ, ಕಾಫಿ ಕೋರ್ಟ್ ಆಡಳಿತ ಮಂಡಳಿ ಉಪಾಧ್ಯಕ್ಷ ಬಿ.ಎಸ್. ಸಂತೋಷ್ ಮುದ್ರೆಮನೆ. ಪ್ರಧಾನ ಕಾರ್ಯದರ್ಶಿ ಎಂ ಎಸ್ ಪ್ರದೀಪ್ ಮುಗ್ರಹಳ್ಳಿ. ಖಜಾಂಚಿ ಜಿ.ಪಿ ಸಂದೇಶ್, ಆಡಳಿತ ಮಂಡಳಿ ಎಲ್ಲಾ ನಿರ್ದೇಶಕರು ಉಪಸ್ಥಿತರಿದ್ದರು.
ಕಾಫಿ ಕೋರ್ಟ್ ಅಧ್ಯಕ್ಷ ಡಿ.ಬಿ.ಜೈಪ್ರಕಾಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಕಾಫಿ ಕೋರ್ಟ್ ಕಳೆದ ಹತ್ತು ವರ್ಷಗಳ ಹಿಂದೆ ಪ್ರಾರಂಭವಾಗಿ ಇವತ್ತು ರಾಜ್ಯದ ಪ್ರತಿಷ್ಠಿತ ಕ್ಲಬ್ ಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಕಾಫಿ ಕೋರ್ಟ್ “ನಮ್ಮ ಪರಿಸರವನ್ನು ಉಳಿಸಿ, ನಮ್ಮ ಸಂಸ್ಕೃತಿಯನ್ನು ಬೆಳೆಸಿ” ಎಂಬ ಧ್ಯೇಯ ವಾಕ್ಯದೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಕಾಫಿ ಕೋರ್ಟ್ ನಲ್ಲಿ ಹಂತ ಹಂತವಾಗಿ ಅನೇಕ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿದ್ದು. ಕ್ಲಬ್ ಹೌಸ್, ಆಂಪಿ ಥಿಯೇಟರ್, ಅತಿಥಿ ಗೃಹಗಳು, ಈಜುಕೊಳ, ಮಕ್ಕಳ ಆಟಕ್ಕಾಗಿ ಪಾರ್ಕ್ ಇದೀಗ ಸುಸಜ್ಜಿತವಾದ ಕ್ರೀಡಾ ಸಂಕೀರ್ಣವನ್ನು ನಿರ್ಮಾಣ ಮಾಡಿದ್ದೇವೆ. ಹೀಗೆ ಹಲವಾರು ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿದ್ದು, ಇದಕ್ಕೆಲ್ಲ ನಮ್ಮ ಪೋಷಕ ಸದಸ್ಯರು, ಆಡಳಿತ ಮಂಡಳಿ ನಿರ್ದೇಶಕರು, ಸರ್ವ ಸದಸ್ಯರು, ಸಿಬ್ಬಂದಿ ವರ್ಗದವರ ಸಹಕಾರ ಕಾರಣವಾಗಿದೆ ಎಂದರು
ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ನಿರಂಜನ ಪಂಚಾಕ್ಷರಿ ಮತ್ತು ಮಂಡ್ಯ ಶಂಕರ್ ನೆರವೇರಿಸಿದರು.



