ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಜೀವನೋಪಾಯಕ್ಕಾಗಿ ತರಕಾರಿ ಮಾರಾಟ ಮಾಡುವ ವ್ಯಾಪಾರಿಯನ್ನು ಯಾರದ್ದೋ ಪ್ರಭಾವಕ್ಕೆ ಮಣಿದು ಒಕ್ಕಲೆಬ್ಬಿಸಬಾರದೆಂದು ಹಳೆಮೂಡಿಗೆರೆ ಗ್ರಾ.ಪಂ. ಹಿತರಕ್ಷಣಾ ಸಮಿತಿ ಮುಖಂಡರು ಬುಧವಾರ ಹೆಳೇಮೂಡಿಗೆರೆ ಗ್ರಾ.ಪಂ. ಎದುರು ಪ್ರತಿಭಟನೆ ನಡೆಸಿ ಆಡಳಿತಾಧಿಕಾರಿ ಮೀನಾಕ್ಷಿ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪಟ್ಟಣದ ನಿವಾಸಿ ಮಹಮ್ಮದ್ ಶೆಫಿ ಎಂಬುವರು ಹಳೇಮೂಡಿಗೆರೆ ಗ್ರಾಮದ ವಲಿಯಂ ಫನಾರ್ಂಡಿಸ್ ಅವರ ಜಮೀನಿನಲ್ಲಿ ಬಾಡಿಗೆ ಪಡೆದು ತರಕಾರಿ ಮತ್ತು ಹಣ್ಣಿನ ವ್ಯಾಪಾರ ನಡೆಸುತ್ತಿದ್ದಾರೆ. ಈ ತರಕಾರಿ ಅಂಗಡಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿದ್ದು, ರಸ್ತೆಯಿಂದ ಸುಮಾರು 40ಅಡಿಗೂ ಹೆಚ್ಚು ದೂರದಲ್ಲಿದೆ. ಇದರಿಂದ ಸಾರ್ವಜನಿಕರಿಗೆ ಹಾಗೂ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿಲ್ಲ.
ಮುಂದಿನ ದಿನದಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ನಡೆಸುವಾಗ ಅಂಗಡಿ ತೆರವುಗೊಳಿಸುವುದಾಗಿ ತರಕಾರಿ ವ್ಯಾಪಾರಿ ಕರಾರು ಪತ್ರದ ಮೂಲಕ ಒಪ್ಪಿಗೆ ನೀಡಿದ್ದಾರೆ. ಆದರೂ ಕೂಡ ಗ್ರಾ.ಪಂ.ಯಿಂದ ತರಕಾರಿ ಅಂಗಡಿ ತೆರವುಗೊಳಿಸಲು ನೋಟೀಸ್ ನೀಡಿ ತೊಂದರೆ ಕೊಡುತ್ತಿದ್ದಾರೆ. ಇದರಿಂದ ತರಕಾರಿ ವ್ಯಾಪಾರ ನಂಬಿ ಜೀವನ ನಡೆಸುತ್ತಿರುವ ಈ ವ್ಯಾಪಾರಿಗೆ ಹೆದ್ದಾರಿ ಅಗಲೀಕರಣವಾಗುವವರೆಗೆ ತಕರಾರಿ ಮಾರಾಟ ನಡೆಸಲು ಅನುಕೂಲ ಮಾಡಿಕೊಡಬೇಕೆಂದು ಸಮಿತಿ ಮುಖಂಡರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಎಲ್.ಬಿ.ರಮೇಶ್, ಎಂ.ಆರ್.ಜಗದಿಶ್, ಜುಬೇರ್, ಜಗದೀಶ್, ನಂಜುಂಡ, ಸತೀಶ್‍ಗೌಡ, ಜ್ಯೋತಿ, ಸಫಿಯಾ ಮತ್ತಿತರರಿದ್ದರು.



