ಈ ಹಿಂದೆ ಕಾಂಗ್ರೆಸ್ ಸರಕಾರವೇ ನೀಡಿದ ಆದೇಶದಂತೆ ನಾಮನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕು ನೀಡಲಾಗಿತ್ತು. ಅದರ ಅನ್ವಯದಂತೆ ನಡೆದ ಚುನಾವಣೆಯಲ್ಲಿ ನಾನು ಗೆಲುವು ಪಡೆದಿದ್ದೆ. ಆದರೆ ಈಗ ನಾಮನಿರ್ದೇಶಿತ ಸದಸ್ಯರ ಮತಗಳು ಅನರ್ಹ ಎಂದು ನ್ಯಾಯಾಲಯದಲ್ಲಿ ತೀರ್ಪು ಬಂದಿದೆ. ಈ ತೀರ್ಪಿಗೆ ನಾನು ತಲೆಬಾಗುತ್ತೇನೆಂದು ವಿಧಾನಪರಿಷತ್ ಮಾಜಿ ಉಪಸಭಾಪತಿ ಎಂಕೆ.ಪ್ರಾಣೇಶ್ ಹೇಳಿದ್ದಾರೆ.
ಶನಿವಾರ ಹೇಳಿಕೆಯಲ್ಲಿ ತಿಳಿಸಿರುವ ಅವರು, ವಿಶೇಷವೆಂದರೆ ವಿಧಾನ ಪರಿಷತ್ತಿನಲ್ಲಿ ಇಲ್ಲಿಯವರೆಗೆ ಗೆದ್ದವರೆಲ್ಲರು ನಾಮನಿರ್ದೇಶಿತ ಮತಗಳನ್ನು ಪಡೆದುಕೊಂಡಿದ್ದಾರೆ. ಇಡೀ ದೇಶದಲ್ಲಿ ನಾಮನಿರ್ದೇಶಿತ ಸದಸ್ಯರ ಮತಗಳಲ್ಲಿ ಜಯಗಳಿಸಿದವರ ನಡುವೆ ಕೇವಲ ನನಗೆ ಮಾತ್ರ ಈ ಆದೇಶ ಅನ್ವಯವಾಗಿದ್ದು ಬೇಸರದ ಸಂಗತಿ. ಈ ಪ್ರಕ್ರಿಯೆ 1997 ರಿಂದಲೂ ನಡೆದುಕೊಂಡು ಬಂದಿದ್ದು, ಇದು ಚುನಾವಣಾ ಆಯೋಗ ಕೊಟ್ಟ ಹಕ್ಕಾಗಿತ್ತು. ಇದರಿಂದ ನಾನು ಯಾವುದೇ ಚುನಾವಣೆ ಅಕ್ರಮವನ್ನು ಮಾಡಿಲ್ಲ. ಗೆಲುವಿನ ಅಂತರ ಕಡಿಮೆ ಇದಿದ್ದರಿಂದ ತನ್ನ ಪ್ರತಿಸ್ಪರ್ಧಿ ಅಭ್ಯರ್ಥಿ ನ್ಯಾಯಾಲಯದ ಮೊರೆ ಹೋದ ಪರಿಣಾಮ ಈ ರೀತಿ ಆದೇಶ ಬಂದಿದೆ.
ಕಳೆದ ನಾಲ್ಕೂವರೆ ವರ್ಷದಲ್ಲಿ ವಿಧಾನ ಪರಿಷತ್ ಸದಸ್ಯನಾಗಿ, ಉಪ ಸಭಾಪತಿಯಾಗಿ ನನ್ನ ಅವಧಿಯಲ್ಲಿ ಪ್ರಾಮಾಣಿಕವಾಗಿ, ಭ್ರಷ್ಟಾಚಾರ ರಹಿತ, ಪಕ್ಷಾತೀತವಾಗಿ ದ್ವೇಷ ರಾಜಕಾರಣ ಮಾಡದೆ ಶ್ಯೆಕ್ಷಣಿಕ, ಸಾಮಾಜಿಕ ಹಾಗೂ ಧರ್ಮನಿಷ್ಠೆಯಿಂದ ನನ್ನ ಕರ್ತವ್ಯ ನಿರ್ವಹಿಸಿದ್ದೇನೆ. ಹಗಲಿರುಳು ಸಾರ್ವಜನಿಕ ಏಳಿಗೆಗಾಗಿ ಶ್ರಮಿಸಿದ್ದೇನೆ. ನನ್ನ ಮೇಲೆ ನಂಬಿಕೆ ಇಟ್ಟು ಪಕ್ಷದ ರಾಷ್ಟ್ರೀಯ ಹಾಗೂ ರಾಜ್ಯದ ನಾಯಕರು, ಮತ ಚಲಾಯಿಸಿದ ಎಲ್ಲಾ ಸದಸ್ಯರಿಗೆ ನಾನು ಅಭಾರಿಯಾಗಿದ್ದೇನೆ.
ಈಗಾಗಲೇ ನಾನು ನನ್ನ ಉಪ ಸಭಾಪತಿ ಹುದ್ದೆ ಮತ್ತು ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ. ಈ ತೀರ್ಪಿನಿಂದ ಯಾರೂ ಎದೆಗುಂದಬೇಕಾಗಿಲ್ಲ. ಅಧಿಕಾರ ಕಳೆದುಕೊಂಡಿರಬಹುದು. ಆದರೆ ಪಕ್ಷದ ಕಾರ್ಯಕರ್ತನಾಗಿ ದುಡಿಯುತ್ತೇನೆ. ನೂತನವಾಗಿ ವಿಧಾನ ಪರಿಷತ್ ಸದಸ್ಯೆಯಾಗಿ ಆಯ್ಕೆಯಾಗಿರುವ ಗಾಯತ್ರಿ ಶಾಂತೇಗೌಡ ಅವರಿಗೆ ಶುಭ ಹಾರೈಸುತ್ತೇನೆಂದು ಹೇಳಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನಪರಿಷತ್ತಿಗೆ 2022ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಬಿಜೆಪಿಯ ಎಂ.ಕೆ.ಪ್ರಾಣೇಶ್ ಅವರು ಕೇವಲ 6 ಮತಗಳಿಂದ ಕಾಂಗ್ರೇಸ್ ನ ಗಾಯತ್ರಿ ಶಾಂತೇಗೌಡ ವಿರುದ್ಧ ಗೆಲುವು ಪಡೆದಿದ್ದರು. ಈ ಚುನಾವಣೆಯಲ್ಲಿ ನಾಮನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕನ್ನು ಪ್ರಶ್ನಿಸಿ ಗಾಯತ್ರಿ ಶಾಂತೇಗೌಡ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಸುದೀರ್ಘ ನಾಲ್ಕೂವರೆ ವರ್ಷಗಳ ಕಾನೂನು ಸಮರದ ನಂತರ, ಮರುಎಣಿಕೆ ಫಲಿತಾಂಸವನ್ನು ನಿನ್ನೆ ಜುಲೈ 31ರಂದು ಹೈಕೋರ್ಟ್ ಪ್ರಕಟಿಸಿತ್ತು. ಕಾಂಗ್ರೇಸ್ ನ ಗಾಯತ್ರಿ ಶಾಂತೇಗೌಡ ಅವರು 9 ಮತಗಳ ಅಂತರದಿಂದ ಗೆಲುವು ಪಡೆದು ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದರು. ಈ ಹಿನ್ನಲೆಯಲ್ಲಿ ಎಂ.ಕೆ. ಪ್ರಾಣೇಶ್ ಅವರು ತಮ್ಮ ವಿಧಾನ ಪರಿಷತ್ ಉಪಸಭಾಪತಿ ಮತ್ತು ಸದಸ್ಯ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.


