ಆಲ್ದೂರಿನ ರಸ್ತೆ ಅಗಲೀಕರಣ ಕುರಿತು ಗುರುವಾರ ರಸ್ತೆ ಸುರಕ್ಷತಾ ಹಿತ ರಕ್ಷಣಾ ಸಮಿತಿ ವತಿಯಿಂದ ಕ್ಷೇತ್ರದ ಶಾಸಕಿ ನಯನ ಮೊಟಮ್ಮನವರನ್ನು ಕಚೇರಿಯಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು.
ಪಟ್ಟಣದಲ್ಲಿ ಉಂಟಾಗುತ್ತಿದ್ದ ಟ್ರಾಫಿಕ್ ಕಿರಿಕಿರಿ, ಪಾರ್ಕಿಂಗ್ ಸಮಸ್ಯೆ, ಮುಂತಾದವುಗಳನ್ನು ಪರಿಹರಿಸುವಂತೆ ಹಿಂದಿನಿಂದಲೂ ಜನಸಾಮಾನ್ಯರಿಂದ ಮನವಿಗಳು ಬರುತ್ತಿದ್ದ ಹಿನ್ನೆಲೆ ಪ್ರಸ್ತುತ ಕ್ಷೇತ್ರದ ಶಾಸಕಿ ನಯನ ಮೋಟಮ್ಮ ರವರು ರಸ್ತೆ ಅಗಲೀಕರಣಕ್ಕೆ ಅನುದಾನ ಒದಗಿಸಿರುವ ಹಿನ್ನೆಲೆ ಪಿಡಬ್ಲ್ಯೂಡಿ ಇಲಾಖೆ ಮತ್ತು ರಸ್ತೆ ಪ್ರಾಧಿಕಾರದ ವತಿಯಿಂದ ರಸ್ತೆಯ ಇಕ್ಕೆಲಗಳಲ್ಲಿ ಮಧ್ಯ ರಸ್ತೆಯಿಂದ 45 ಅಡಿ ಅಗಲೀಕರಣಕ್ಕೆ ಅನುವು ಮಾಡಿಕೊಟ್ಟರೆ ಅನುಕೂಲ ಎಂದು ಇಲಾಖೆ ಅಭಿಪ್ರಾಯ ತಿಳಿಸಿದ್ದು ಈ ಕುರಿತು ಆಲ್ದೂರು ಪಟ್ಟಣದಲ್ಲಿ ಸಾರ್ವಜನಿಕ ಸಭೆ ನಡೆಸಿದ್ದು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು ಬಳಿಕ ಕೆಲವು ಅಂಗಡಿ ಮುಂಗಟ್ಟುಗಳ ಮಾಲೀಕರು ಮನೆಯ ಮಾಲೀಕರು ಶಾಸಕರನ್ನು ಭೇಟಿ ಮಾಡಿ ರಸ್ತೆ ಅಗಲೀಕರಣಕ್ಕೆ ಇಲಾಖೆ ನಿಗದಿಪಡಿಸಿರುವ ವಿಸ್ತಾರವನ್ನು ಕಡಿಮೆ ಮಾಡಬೇಕು ಎಂದು ಮನವಿ ಸಲ್ಲಿಸಿದ್ದರು.
ಆಲ್ದೂರು ಸರ್ವ ಸಂಘಟನೆಗಳ ಮತ್ತು ಜನಸಾಮಾನ್ಯರು ಒಗ್ಗೂಡಿ ರಸ್ತೆ ಅಗಲೀಕರಣಕ್ಕೆ ಶಾಸಕರಿಗೆ ಬೆಂಬಲ ಒದಗಿಸಿ ಭವಿಷ್ಯದ ದೃಷ್ಟಿಯಿಂದ ಕಾಮಗಾರಿ ಸರ್ವರ ಸಮ್ಮತದೊಂದಿಗೆ ನಡೆಯಲು ತೀರ್ಮಾನ ನಡೆದು ಅದರಂತೆ ನೂರಾರು ಸಂಖ್ಯೆಯಲ್ಲಿ ಗುರುವಾರ ಶಾಸಕರ ಮನೆಗೆ ಆಲ್ದೂರು ರಸ್ತೆ ಸುರಕ್ಷತಾ ಹಿತ ರಕ್ಷಣಾ ಸಮಿತಿ ವತಿಯಿಂದ ಇಲಾಖೆಯ ನಿಯಮಾವಳಿಗಳಂತೆ ರಸ್ತೆ ಅಗಲೀಕರಣ ನಡೆಯಲಿ ಮತ್ತು ಇದರ ಕುರಿತು ಶಾಸಕರ ಅಧ್ಯಕ್ಷತೆಯಲ್ಲಿ ಬಹಿರಂಗ ಸಭೆಯನ್ನು ಆಯೋಜಿಸಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಿದರು.
ಶಾಸಕರು ಈ ಕುರಿತು ಇಲಾಖೆಯೊಂದಿಗೆ ಚರ್ಚಿಸಿ ಜನಾಭಿಪ್ರಾಯ ದಂತೆ ಸರ್ವೆ ನಡೆಸಲಾಗುವುದು ಎಂದು ಪ್ರತಿಕ್ರಿಯೆ ನೀಡಿದ್ದಾರೆ ಎಂದು ರಸ್ತೆ ಹಿತ ರಕ್ಷಣಾ ಸಮಿತಿಯ ಪದಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಮಿತಿಯ ಪದಾಧಿಕಾರಿಗಳಾದ ಹೆಡದಾಳು ಕುಮಾರ್, ನವರಾಜು ಎಚ್, ಲತೇಶ್ ಗೌಡ, ಅಶೋಕ್ ಡಿಬಿ,ನೂರ್ ಮಹಮ್ಮದ್, ಮಾಜಿ ಪಂಚಾಯಿತಿ ಸದಸ್ಯರಾದ ಸುಂದರ್ ಗಾಳಿ ಗಂಡಿ, ಗೋಪಾಲ್ ಚಿಕ್ಕ ಮಾಗರವಳ್ಳಿ, ಮಂಜುನಾಥ್ ಹೆಡದಾಳು,ಪುಟ್ಟರಾಜು, ನಾಗೇಶ್ ಡಿಜೆ, ಯೋಗೇಶ್, ಗಣೇಶ್ ಕಠಾರದಹಳ್ಳಿ, ಮುಖಂಡರುಗಳು ಇದ್ದರು.


