ನಿನ್ನೆ ರಾತ್ರಿ ನಡೆದ ಏಷ್ಯಾಕಪ್ ಸೂಪರ್ ಫೋರ್ ಹಣಾಹಣಿಯಲ್ಲಿ ಶ್ರೀಲಂಕಾ ತಂಡ ಪಾಕ್ ವಿರುದ್ಧ ರೋಚಕ ಗೆಲುವು ಪಡೆಯಿತು. ಈ ಮೂಲಕ ಶ್ರೀಲಂಕಾ ತಂಡ ಪಂದ್ಯಾವಳಿಯ ಫೈನಲ್ ಪ್ರವೇಶಿಸಿತು. ಪಾಕಿಸ್ಥಾನದ ಫೈನಲ್ ಕನಸು ನುಚ್ಚುನೂರಾಯಿತು.
ಸೆಮಿಫೈನಲ್ ಎಂದೇ ಪರಿಗಣಿಸಲ್ಪಟ್ಟ ಈ ಪಂದ್ಯದಲ್ಲಿ ಗೆದ್ದ ತಂಡ ಭಾರತದ ವಿರುದ್ಧ ಫೈನಲ್ ಆಡಲು ಅರ್ಹತೆ ಪಡೆಯುತ್ತಿತ್ತು. ಹಾಗಾಗಿ ಎರಡೂ ತಂಡಗಳಿಗೂ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿತ್ತು. ಪಂದ್ಯದ ನಡುವೆ ಮಳೆ ಬಂದಿದ್ದರಿಂದ 42 ಓವರ್ ಗಳಿಗೆ ಕಡಿತಗೊಳಿಸಲ್ಪಟ್ಟ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 252 ರನ್ ಗಳ ಗುರಿ ನೀಡಿತ್ತು. ವಿಕೆಟ್ ಕೀಪರ್ ಬ್ಯಾಟ್ಸ್ ಮನೆ ರಿಜ್ಞಾನ್ 73 ಎಸೆತಗಳಲ್ಲಿ ಬಿರುಸಿನ 86 ರನ್ ಗಳಿಸಿದ ಪರಿಣಾಮ ತಂಡವು ಉತ್ತಮ ಮೊತ್ತ ಪೇರಿಸಿತ್ತು.
ಗುರಿಯನ್ನು ಬೆನ್ನಟ್ಟಿದ ಲಂಕಾ ಸಾಧಾರಣ ಆರಂಭವನ್ನು ಕಂಡಿತು. ಆದರೆ ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಪ್ರದರ್ಶನ ತೋರಿದ ಪಂದ್ಯವನ್ನು ತನ್ನ ಹಿಡಿತಕ್ಕೆ ಪಡೆದಿತ್ತು. ವಿಕೆಟ್ ಕೀಪರ್ ಕುಶಾಲ್ ಮೆಂಡಿಸ್ 87 ಎಸೆತಗಳಲ್ಲಿ 91 ರನ್ ಗಳಿಸಿದರೆ, ಸಮರವಿಕ್ರಮ 51 ಬಾಲ್ ಗಳಲ್ಲಿ 48 ರನ್ ಗಳಿಸಿ ಲಂಕಾವನ್ನು ಗೆಲುವಿನ ಹಳಿಗೆ ತಂದಿದ್ದರು. ಆದರೆ ಕೊನೆಯಲ್ಲಿ ಪಾಕ್ ತಿರುಗೇಟು ನೀಡಿ ವಿಕೆಟ್ ಗಬಳಿಸಿತ್ತು. ಆದರೆ ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತ ಚರಿತ ಅಸಲಂಕಾ 47 ಎಸೆತಗಳಲ್ಲಿ ಅಜೇಯ 49 ರನ್ ಗಳಿಸಿ ಲಂಕಾವನ್ನು ಗೆಲುವಿನ ದಡ ಸೇರಿಸಿದರು.
ಕೊನೆಗೆ ರೋಚಕ ಹಂತ ತಲುಪಿದ ಪಂದ್ಯದಲ್ಲಿ ಕೊನೆಯ ಎಸೆತದವರೆಗೆ ಪಂದ್ಯವು ಕುತೂಹಲ ಕೆರಳಿಸಿತ್ತು. ಕೊನೆಯ ಓವರ್ ನಲ್ಲಿ 8 ರನ್ ಗಳು ಬೇಕಾಗಿತ್ತು. ಪಂದ್ಯದ ಕೊನೆಯ ಎಸೆತದಲ್ಲಿ ಲಂಕಾ ಪಂದ್ಯವನ್ನು ಗೆದ್ದು ಬೀಗಿತು. ಈ ಮೂಲಕ ಪಂದ್ಯಾವಳಿಯ ಫೈನಲ್ ತಲುಪಿತು.
ಸೆಪ್ಟಂಬರ್ 17ರಂದು ಭಾನುವಾರ ಕೊಲಂಬೋ ದಲ್ಲಿ ಭಾರತ ಮತ್ತು ಶ್ರೀಲಂಕಾ ತಂಡಗಳು ಫೈನಲ್ ನಲ್ಲಿ ಮುಖಾಮುಖಿಯಾಗಲಿವೆ.



