kagga 2

 

 

  • ನಿರೂಪಣೆ : ಡಾ. ಸುಧಾ ಹೆಚ್.ಎಸ್
    ಸಂಸ್ಕೃತ ಉಪನ್ಯಾಸಕರು,
    ಮೈಸೂರು.
    ಮೊ. 9448233119

ಜಗತ್ತಿನ ಸೃಷ್ಟಿಯಲ್ಲಿ ಸಾವಿರಾರು ತರಹದ ವೈಚಿತ್ರ್ಯಗಳಿವೆ. ಈ ಸೃಷ್ಟಿ ಹೇಗಾಯಿತು …? ಯಾವಾಗ ಪ್ರಾರಂಭವಾಯಿತು …? ಎಂಬೆಲ್ಲಾ ಪ್ರಶ್ನೆಗಳು ನಮಗೆ ಸಹಜವಾಗಿಯೇ ಬರುತ್ತದೆ. ಒಂದು ಜೀವದೊಳಗಿಂದ ಇನ್ನೊಂದು ಜೀವದ ಸೃಷ್ಟಿ … ಇದು ವಿಸ್ಮಯವೇ ಸರಿ! ಇಂತಹ ಜಗತ್ತಿನ ಸೃಷ್ಟಿಯು ತರ್ಕಕ್ಕೆ ನಿಲುಕುವುದಿಲ್ಲ “ವೃಕ್ಷಬೀಜ ನ್ಯಾಯದಂತೆ” ಒಂದನ್ನೊಂದು ಆಶ್ರಯಿಸಿಕೊಂಡೇ ಇರುತ್ತದೆ. ಅಣುರೇಣುತೃಣಕಾಷ್ಟಗಳು ಸಹ ಆ ಸೃಷ್ಟಿಕರ್ತನ ಅಧೀನ. ನಾವು ಎಷ್ಟೇ ಹಾರಾಡಿ ಕುಣಿದಾಡಿದರೂ ಸಹ ಅವನ ಲೆಕ್ಕಾಚಾರವೇ ಅಂತಿಮವಾದುದು – ಇದನ್ನು ಅರಿತು ಬಾಳಿದಾಗ ಮಾತ್ರ ಜೀವನ ಸಾರ್ಥಕ ಎನಿಸುವುದು. ಇಡೀ ವಿಶ್ವದ ಸೃಷ್ಟಿಯ ಹಿಂದೆ ಅಡಗಿರುವ ಬೃಹತ್ ಶಕ್ತಿ ಅದುವೇ ಈ ಪರಮಾತ್ಮನ ಸಾರ, ಅವನು ಜಗತ್ತಿನ ಪ್ರತಿಯೊಂದು ಆಗುಹೋಗುಗಳಿಗೂ ಒಂದು ಲೆಕ್ಕಾಚಾರವನ್ನಿಟ್ಟು ನಡೆಸುತ್ತಿರುವುದು ಒಂದು ಸೋಜಿಗವೇ ಸರಿ! ಇಂತಹ ಒಂದು ಸೃಷ್ಟಿ ವೈಚಿತ್ರ್ಯ ಹೇಗಿದೆಯೆಂಬುದನ್ನು ನಮ್ಮ ಡಿ.ವಿ.ಜಿ.ಯವರು ಈ ರೀತಿ ಹೇಳುತ್ತಾರೆ.

ಕ್ರಮದ ನಭವಿಕೃತಿ ವಾಯ್ವಾದಿ ರೂಪಗಳಂತೆ|
ಕ್ರಿಮಿ ಬೀಜದಿಂ ಮತ್ಸ್ಯ ಮೃಗ ಮನುಜರಂತೆ||
ಕ್ರಮ ವಿವರವೇನಿರಲಿ ಸೃಷ್ಟಿಯ ವಿಧಾನದಲಿ|
ಸಮಸದದು ಸತ್ತ್ವವನು – ಮಂಕುತಿಮ್ಮ||

ನಿಯಮಗಳಿಂದ ಬದ್ಧವಾಗಿರುವ ಆಕಾಶದ ಸ್ವರೂಪ, ಗಾಳಿ, ನೀರು, ಅಗ್ನಿ ಇತ್ಯಾದಿಗಳ ರೂಪ, ಕ್ರಿಮಿ ಕೀಟಗಳು, ಮೀನು, ಮೃಗಗಳು, ಮನುಷ್ಯ ಈ ರೀತಿ ಯಾವುದೇ ಇರಲಿ ಇವೆಲ್ಲವೂ ಸಹ ಪರಮಾತ್ಮನ ಸತ್ತ್ವಗಳು. ಪ್ರಕೃತಿಯ ಪ್ರತಿಯೊಂದು ವಸ್ತುಗಳು, ಜೀವಿಗಳು ಸಹ ಬದಲಾಗುತ್ತವೆ ಹಾಗೆಯೇ ನಾಶವೂ ಆಗುತ್ತವೆ ಆದರೆ ಇದರ ಹಿಂದಿರುವ ಪರಮಾತ್ಮನ ಸತ್ತ್ವ ಎಂದಿಗೂ ಸವೆಯುವುದಿಲ್ಲ (ಸಮಸದು).
ಸೃಷ್ಟಿಕರ್ತನಾದ ಪರಮಾತ್ಮನು ಜೀವಿಯು ಜೀವಿಸಲು ಬೇಕಾದ ಗಾಳಿ, ನೀರು, ಬೆಂಕಿ, ಎಲ್ಲವನ್ನೂ ನೀಡಿ ಅನುಕೂಲಕ್ಕೆ ತಕ್ಕ ಹಾಗೆ ಬಳಸಿಕೊಳ್ಳುವ ಸಾಮಥ್ರ್ಯ ಜಾಣತನವನ್ನು ಎಲ್ಲ ಜೀವಿಗಳಿಗೂ ನೀಡಿದ್ದಾನೆ. ಪ್ರಾಣಿ ಪಕ್ಷಿಗಳೂ ಸಹ ತಮ್ಮ ತಮ್ಮ ಅನುಕೂಲತೆಗೆÉ ತಕ್ಕ ವ್ಯವಸ್ಥೆ ಮಾಡಿಕೊಂಡಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ಪ್ರತಿ ಜೀವಿಯ ಹುಟ್ಟಿನೊಂದಿಗೆ ನಾಶವನ್ನು ಸಹ ಜೋಡಿಸಿಯೇ ಕಳಿಸಿರುತ್ತಾನೆ. ಇದು ಪ್ರಕೃತಿಗೂ ಸಹ ಹೊರತಲ್ಲ, ಹುಟ್ಟಿದ ಪ್ರತಿಯೊಂದು ವಸ್ತುವು ಸಹ ಈ ಭೂಮಿಯಲ್ಲಿ ಪುನಃ ಲೀನವಾಗಲೇ ಬೇಕು ಎಂಬುದು ಅವನ ನಿಯಮ, ಈ ನಿಯಮದಂತೆ ತಾನು ವಿಶ್ವವನ್ನು ಮುನ್ನಡೆಸುತ್ತಾ ತಾನು ಮಾತ್ರ ಎಂದೆಂದಿಗೂ ಅಜರಾಮರನಾಗಿಯೇ ಇರುತ್ತಾನೆ. ಒಂದು ವೇಳೆ ಇಂತಹ ಒಂದು ಅಗಾಧ ಶಕ್ತಿಗೆ ವಿನಾಶ ಎಂಬುದು ಇದ್ದಿರುತ್ತಿದ್ದರೆ ಇಂದು ಈ ಜಗತ್ತು ಅಲ್ಲೋಲ ಕಲ್ಲೋಲವಾಗುತ್ತಿತ್ತು ಎಂಬುದರಲ್ಲಿ ಯಾವ ಸಂಶಯವೂ ಇಲ್ಲ. ಈ ರೀತಿ ಅಚಲವಾದ ಶಕ್ತಿಯೇ ಈ ‘ಪರಮಾತ್ಮ’. ಅವನ ಈ ಶಕ್ತಿಯ ಕೂಸು ಈ ಜಗತ್ತು. ಆದ್ದರಿಂದ ಈ ಸವೆಯದ ಸತ್ತ್ವವನ್ನು ನಾವು ಗೌರವಿಸುತ್ತಾ ಅವನಿಗೆ ತಲೆಬಾಗಲೇಬೇಕು. ಅವನ ಈ ಶಕ್ತಿ ಹೇಗಿದೆ ಎಂದರೆ –

ಪರಮಾಣುವಿಂ ಪ್ರಪಂಚಗಳ ಸಂಯೋಜಿಪುದು|
ಮರೆಯಿಂದ ಸೃಷ್ಟಿಯಂತ್ರವ ಚಾಲಿಸುವುದು||
ಚರಲೀಲೆಯಲಿ ಜೀವವೆನಿಪ ಚೈತನ್ಯವದು|
ಪರಸತ್ತ್ವಶಕ್ತಿಯೆಲೊ – ಮಂಕುತಿಮ್ಮ||

ಅತ್ಯಂತ ಸೂಕ್ಷ್ಮ ಕಣಗಳಿಂದ ಈ ವಿಶ್ವವನ್ನು ಕೂಡಿಸುವುದು ಕಣ್ಣಿಗೆ ಕಾಣದಂತೆ ನಿಂತು ಈ ಸೃಷ್ಟಿಯಂತ್ರವನ್ನು ಓಡಿಸುವುದು ಈ ಸೃಷ್ಟಿಯ ಲೀಲೆಯಲಿ ಜೀವನ ಚೈತನ್ಯವನ್ನು ತುಂಬುವ ಚೈತನ್ಯವೇ ಈ ಪರಮಾತ್ಮನ ಶಕ್ತಿ.

ಅಗೋಚರ- ಅನನ್ಯ- ಅಸಾಧಾರಣವಾದ ಈ ನಿಗೂಢ ಶಕ್ತಿ ಇಡೀ ಜಗತ್ತಿಗೆ ಚೈತನ್ಯ ತುಂಬಿ ನಡೆಸುತ್ತಿರುವುದು ಒಂದು ಪವಾಡವೇ ಸರಿ. ಜೀವದೊಳಗೊಂದು ಜೀವವನ್ನು ಸೃಷ್ಟಿಮಾಡುವ ಅವನ ಅಸಾಧಾರಣ ಶಕ್ತಿಗೆ ವಿಜ್ಞಾನ ಎಷ್ಟೇ ಮುಂದುವರೆದಿದೆ ಎಂದರೂ ಸಹ ಅವನಣತಿಯಿಲ್ಲದೆ ನಡೆಯಲಾರದು ಎಂಬ ಪಾಠವನ್ನು ಕಲಿಸಿಯೇ ತೀರುತ್ತಾನೆ, ಅದಕ್ಕೆ ಸಾಕ್ಷಿಯೆಂಬಂತೆ ಹಲ ವಾರು ಘಟನೆಗಳು ನಮ್ಮ ಕಣ್ಮುಂದೆಯೇ ಸಾಕಷ್ಟು ಪ್ರಯತ್ನ ಪಟ್ಟರೂ ನಡೆಯದಿರುವುದೇ ಸಾಕ್ಷಿಯಾಗಿದೆ. ಜಗತ್ತಿನ ಜೀವಿಗಳಿಗೆಲ್ಲ ಆಹಾರ ಒದಗಿಸುತ್ತಾ, ಪ್ರತಿಯೊಂದು ಜೀವಿಯೂ ಒಂದಲ್ಲ ಒಂದು ರೀತಿಯಲ್ಲಿ ಬೇರೊಂದು ವಸ್ತುವನ್ನು ಅವಲಂಬಿಸಿಕೊಂಡು ಬದುಕುವ ಕಲೆಯನ್ನು ಕೊಟ್ಟಿರುವ ಅಗೋಚರ ಶಕ್ತಿಯು ಅನನ್ಯ ಎಂಬುದರಲ್ಲಿ ಯಾವ ಅಚ್ಚರಿಯೂ ಇಲ್ಲ.
ಒಂದು ವೇಳೆ ಈ ಪ್ರಪಂಚದಲ್ಲಿ ಹುಟ್ಟು ಮಾತ್ರವಿದ್ದು ವಿನಾಶ ಇಲ್ಲದಿದ್ದಲ್ಲಿ ವಿಶ್ವದ ಪರಿಸ್ಥಿತಿಯ ಚಿತ್ರಣವೇ ಬದಲಾಗಿರುತ್ತಿತ್ತು, ಹೊಸ ಹೊಸ ಆವಿಷ್ಕಾರಗಳತ್ತ ಪ್ರಪಂಚದ ಹೆಜ್ಜೆ ಸಾಧ್ಯವಾಗದೇ ಹೋಗಿರುತ್ತಿತ್ತು ಹಾಗೆಂದೇ ಈ ಪ್ರತಿಯೊಂದು ಪದಾರ್ಥ ಹಾಗೂ ಜೀವಾತ್ಮಗಳಿಗೆ ಇಂತಿಷ್ಟೇ ವರ್ಷಗಳ ಆಯುಷ್ಯ ಎಂದು ನಿಗದಿಪಡಿಸುವ ಮೂಲಕ ಪರಮಾತ್ಮನು ನಮಗೆ ಹೊಸ ಹುಟ್ಟಿನೊಂದಿಗೆ ನವಲೋಕದ ಅನಾವರಣ ಆಗುವಂತೆ ಮಾಡಿದ್ದಾನೆ. ಮನುಷ್ಯನಾಗಲಿ, ಪ್ರಾಣಿ ಪಕ್ಷಿಯಾಗಲಿ, ಗಿಡಮರಗಳಾಗಲಿ ಚಿರಕಾಲ ಸ್ಥಿರವಾಗಿ ಉಳಿಯುವ ಪ್ರಮೇಯವೇ ಇಲ್ಲ. ಒಂದು ವೇಳೆ ಈ ಮನುಷ್ಯಜೀವಿ ಅವಿನಾಶಿ ಎಂದಾಗಿದ್ದಲ್ಲಿ ಇನ್ನು ಏನೇನು ಅನಾಹುತಗಳು ಆಗಿ ಪ್ರಪಂಚ ದುರವಸ್ಥೆ ಹೊಂದಬೇಕಾಗಿತ್ತೋ …! ಆದ್ದರಿಂದ ಈ ‘ವಿನಾಶ’ ಎಂಬುದು ಒಂದು ವರವಾಗಿ ವಿಶ್ವವನ್ನು ಸಂರಕ್ಷಿಸಿದೆ ಎಂಬುದನ್ನು ಎಲ್ಲರೂ ಒಪ್ಪಿಕೊಳ್ಳುವಂತಹ ಸತ್ಯವಾದ ವಿಚಾರವಾಗಿದೆ. ಪಂಚಭೂತಗಳಿಂದ ಸೃಷ್ಟಿಯಾದ ಈ ಪ್ರಪಂಚದ ಜೀವಿಯೂ ಪಂಚಭೂತಗಳಲ್ಲಿಯೇ ಲೀನವಾಗುವಂತೆ ಮಾಡಿರುವ ಪರಮಾತ್ಮನ ಸೃಷ್ಟಿ ಲೀಲೆಯ ತಂತ್ರಗಾರಿಕೆ ಇಂದಿನ ಎಲ್ಲ ವಿಜ್ಞಾನಕ್ಕೆ ಸವಾಲು ಹಾಕುವಂತಿದೆ ಹಾಗೆಂದೇ ಎಷ್ಟೋ ವಿಷಯಗಳಿಗೆ ಯಾವ ವಿಜ್ಞಾನಿಗಳಿಗೂ ಉತ್ತರ ದೊರೆಯದೆ ಅವು ಪ್ರಶ್ನೆಗಳಾಗಿಯೇ ಉಳಿದಿದೆ ಎಂದರೆ ತಪ್ಪಾಗಲಾರದು. ಹಾಗಾದರೆ ಈ ಪರಮಾತ್ಮನ ಶಕ್ತಿ ಕೇವಲ ಒಂದು ಜೀವಿಗೋ ಅಥವಾ ಜೀವಿಯ ಒಡಲಿನ ಒಂದು ಭಾಗಕ್ಕೆ ಮಾತ್ರ ಸೀಮಿತವೋ …? ಅಥವಾ ಇಡೀ ಜಗತ್ತಿಗೋ ಎಂಬ ಪ್ರಶ್ನೆ ಏಳುವುದು ಸಹಜವೇ. ಅದನ್ನೇ ಮಾನ್ಯ ಡಿ.ವಿ.ಜಿ.ಯವರು ಈ ರೀತಿ ಸ್ಪಷ್ಟಗೊಳಿಸುತ್ತಾರೆ –

ಸ್ಥಾಪಿತವೇ ಜೀವ ನಿನ್ನೊಡಲಿನೊಂದಂಗದಲಿ?|
ಆಪಾದಶಿರವುಮದು ತುಂಬಿರುವುದಲ್ತೆ?||
ವ್ಯಾಪಿಸಿಹುದಂತೊಂದು ಚೈತನ್ಯ ವಿಶ್ವದಲಿ|
ಲೇಪಗೊಳ್ಳದ ಸತ್ತ್ವ – ಮಂಕುತಿಮ್ಮ||

ನಿನ್ನ ದೇಹದ ಒಂದು ಭಾಗದಲ್ಲಿ ಮಾತ್ರ ಈ ಜೀವದ ನೆಲೆಯೇ…? ತಲೆಯಿಂದ ಕಾಲಿನವರೆಗೂ ಅದು ತುಂಬಿಕೊಂಡಿರು ವುದು ತಾನೇ …? ಅದೇ ರೀತಿ ಇಡೀ ಈ ಜಗತ್ತನ್ನು ಚೈತನ್ಯ ಎನ್ನುವುದು ವ್ಯಾಪಿಕೊಂಡಿದೆ ಈ ಚೈತನ್ಯ ಎಂಬುದಕ್ಕೆ ಏನೂ ಸಹ ಅಂಟಿಕೊಳ್ಳಲಾಗುವುದಿಲ್ಲ.
ಜೀವ ಎಂಬುದು ‘ಉಸಿರು’. ಇದು ವಾಯುವಿನ ರೂಪದಲ್ಲಿ ಇಡೀ ಶರೀರವನ್ನೇ ವ್ಯಾಪಿಸಿಕೊಂಡಿದೆ. ಇದು ಪ್ರಪಂಚದ ಪ್ರತಿಯೊಂದಕ್ಕೂ ಸಹ ಇದೇ ರೀತಿ ಒಂದು ಚೈತನ್ಯ ಆವರಿಸಿಕೊಂಡಿದೆ. ಶರೀರದಲ್ಲಿ ಇರತಕ್ಕಂತಹ ವಾಯುವಿನ ರೂಪದ ಚೈತನ್ಯ ಕೇವಲ ಒಂದೇ ಕಡೆಯಲ್ಲಿ ಇರದೆ ಇಡೀ ಶರೀರದಾದ್ಯಂತ ಒಂದು ಚೈತನ್ಯದ ರೂಪದಲ್ಲಿದೆ; ಆದ್ದರಿಂದಲೇ ದೇಹದಲ್ಲಿ ಉಸಿರು ನಿಂತಾಗ ಇಡೀ ದೇಹವೇ ಕೊರಡಿನಂತಾಗುತ್ತದೆ. ಆದ್ದರಿಂದ ಈ ಚೈತನ್ಯವೇ “ಜೀವ” ಈ ಜೀವವು ಪ್ರಪಂಚದ ಪ್ರತಿಜೀವಿಗೂ ಸಹ ಒಂದೇ ತೆರನಾಗಿದ್ದು ಈ ಚೈತನ್ಯಾತ್ಮಕವಾದ ವಾಯುವು ದೇಹವನ್ನು ಬಿಟ್ಟು ಹೋದಾಗ ಅದು ಕೊರಡಿನಂತಾಗುತ್ತದೆ. ಅಂತೆಯೇ ಈ ಪ್ರಪಂಚವೂ ಸಹ ಒಂದು ಅಗೋಚರ ಶಕ್ತಿಯಿಂದ ಚೈತನ್ಯಾತ್ಮಕವಾಗಿದೆ. ಈ ಚೈತನ್ಯ ಎಲ್ಲ ಜೀವಿಗಳಲ್ಲಿ ಇದ್ದರೂ ಸಹ ತಾನು (ಚೈತನ್ಯ) ತಾವರೆ ಎಲೆಯ ಮೇಲಿನ ಬಿಂದುವಿನಂತಿದ್ದು ಯಾವುದೇ ಒಂದು ಲೌಕಿಕ ವ್ಯವಹಾರಕ್ಕೆ ಅಂಟಿಕೊಳ್ಳದೇ ನಿಂತಿದೆ. ಈ ಒಂದು ಅಗೋಚರ ಶಕ್ತಿ ಚೈತನ್ಯ ರೂಪದಲಿ ಪ್ರತಿಯೊಂದು ಜೀವಿಯಲ್ಲಿಯೂ ತುಂಬಿಕೊಂಡಿದೆ. ಈ ಚೈತನ್ಯಾತ್ಮಕ ಶಕ್ತಿಯು ಪ್ರಪಂಚದ ಯಾವ ಸತ್ತ್ವಕ್ಕೂ ಅಂಟಿಕೊಳ್ಳದೆ ಮನುಷ್ಯರಿಗೆ ಕಾಣಂತಂದಿದ್ದು ‘ಅಗೋಚರ, ಅನಂತ, ಅನನ್ಯ’ ಎನಿಸಿಕೊಂಡಿದೆ. ಈ ಅಗೋಚರ ಶಕ್ತಿಯ ರಹಸ್ಯ ಇಂದಿನ ಈ ವೈಜ್ಞಾನಿಕ ಯುಗಕ್ಕೂ ಸಹ ಸವಾಲಾಗಿಯೇ ಉಳಿದಿದೆ.

ಈ ‘ಚೈತನ್ಯ’ವೇ ಪ್ರಪಂಚದ ಆಗುಹೋಗುಗಳ ನಿಯಂತ್ರಕ. ಹಾಗಾಗಿ ಎಷ್ಟೋ ಸಂಗತಿಗಳು ಇಂದಿಗೂ ಸಹ ವಿಸ್ಮಯವಾಗಿಯೇ ಉಳಿದಿವೆ. ಒಂದು ವೇಳೆ ಎಲ್ಲವೂ ಸಹ ನಮ್ಮ ಕೈಯಲ್ಲಿರುತ್ತಿದ್ದರೆ ಪ್ರಪಂಚದ ಗತಿ ಅಲ್ಲೋಲಕಲ್ಲೋಲವಾಗುತ್ತದೆ ಎಂಬ ದೂರದೃಷ್ಟಿ ಯಿಂದ ಆ ಪರಮಾತ್ಮ ಕೆಲವೊಂದನ್ನು ತಾನೇ ಇಟ್ಟುಕೊಂಡಿದ್ದಾನೆ ಎನಿಸುತ್ತದೆ. ಈ ಅಗೋಚರ ಚೈತನ್ಯಾತ್ಮಕ ಶಕ್ತಿಯೇ ಸೃಷ್ಟಿಯ ರಹಸ್ಯ. ಕಣ್ಣಿಗೆ ಗೋಚರವಾಗುವ ಅನೇಕ ವಸ್ತುಗಳ ಹಾಗೂ ವಿಷಯಗಳ ಹಿಂದೆ ಈ ಅಗೋಚರ ಶಕ್ತಿಯ ಚೈತನ್ಯ ತುಂಬಿರುವುದರಿಂದ ಅವೆಲ್ಲವೂ ಸಹ ನಮ್ಮೊಳಗೆ ಒಂದು ಅರಿವಾಗದ ಭಾವನೆಯನ್ನು ತುಂಬಿ ಚೈತನ್ಯಾತ್ಮಕವಾಗಿ ಕಾಣುತ್ತವೆ. ಆದ್ದರಿಂದ ಪ್ರಕೃತಿ, ಉದಯಿಸುವ ರವಿ, ಚಂದಿರನ ಬೆಳದಿಂಗಳು, ಬಾನಿನಿಂದ ಹನಿಹನಿಯಾಗಿ ಇಳೆಗೆ ಇಳಿವ ಮಳೆ ಇವೆಲ್ಲವೂ ನಿತ್ಯ ನೋಡುತ್ತಿದ್ದರೂ ಸಹ ನವನವೀನವೇ ಆಗಿ ನಮ್ಮಲ್ಲಿ ಹೊಸದೊಂದು ಭಾವನೆಯನ್ನು ಮೂಡಿಸುತ್ತವೆ. ಜಗತ್ತಿಗೆ ಚೈತನ್ಯವನ್ನು ತುಂಬಿ ತಾನು ಅಗೋಚರವಾಗಿರುವ ಈ ಅಗಾಧ ಶಕ್ತಿಗೆ ನಮೋನ್ನಮಃ ಎನ್ನೋಣವೇ …!

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ