ಕಾಡಾನೆ, ಕಾಡುಪ್ರಾಣಿಗಳ ಹಾವಳಿ ಬಗ್ಗೆ ಮತ್ತು ಬೆಳೆ ವಿಮೆ ಹಾಗೂ ರೈತರಿಗೆ ಆಗುತ್ತಿರುವ ಸಂಕಷ್ಟಗಳ ಬಗ್ಗೆ ಚಿಕ್ಕಮಗಳೂರು ಹೆಚ್ಚುವರಿ ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿಗಳಿಗೆ ಮತ್ತು ಪ್ರಧಾನಮಂತ್ರಿ ಗಳಿಗೆ ರೈತ ಸಂಘದಿಂದ ಮನವಿಯನ್ನು ಸಲ್ಲಿಸಲಾಯಿತು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಾರ್ಪೋರೇಟ್ ನೀತಿಯಿಂದ ರೈತರು, ಕಾರ್ಮಿಕರ ಜೊತೆಗೆ ಪಟ್ಟಣದಲ್ಲಿರುವ ಸಣ್ಣಪಟ್ಟ, ವ್ಯಾಪಾರಿಗಳು ಬೀದಿಗೆ ಬರುವಂತಾಗಿದೆ. ಬೆಳೆದ ಬೆಳೆಗೆ ಅವೈಜ್ಞಾನಿಕ ಬೆಲೆ. ಅತಿವೃಷ್ಟಿ, ಅನಾವೃಷ್ಠಿ, ಬೆಳೆನಷ್ಟ, ನಿರಂತರ ಕಾಡುಪ್ರಾಣಿಗಳ ಹಾವಳಿಯಿಂದ ಬೆಳೆನಷ್ಟಕ್ಕೆ ಸರಿಯಾದ ಪರಿಹಾರಕೊಡದ ಕಾರಣ, ರೈತರ ಬೆಳೆಗೆ ವೈಜ್ಞಾನಿಕ ಬೆಲೆ ಸಿಗದೇ ಹೋಗಿರುವುದರಿಂದ ರೈತರು ಸಾಲಗಾರರಾಗಿದ್ದಾರೆ. ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಲಕ್ಷಾಂತರ ರೈತರು ಮಾನಸಿಕ ಖಿನ್ನತೆಗೆ ಗುರಿಯಾಗಿದ್ದಾರೆ. ಜೀವನ ನಡೆಸುವುದು ಕಷ್ಟಕರವಾಗಿದೆ.
ವಿದೇಶಿ ಕಂಪೆನಿಗಳ ಮಾಲ್ ಸಂಸ್ಕೃತಿ, ಆನ್‌ಲೈನ್ ವ್ಯಾಪಾರದಿಂದ ಸ್ಥಳಿಯ ದಿನಸಿ, ಬಟ್ಟೆ, ಪಾದರಕ್ಷೆ, ಹೋಟೇಲ್ ವ್ಯವಹಾರ ಮಾಡುತ್ತಿರುವವರು ಅಂಗಡಿ ಮುಚ್ಚಬೇಕಾದಂತಹ ದುಸ್ಥಿತಿ ಬಂದೊದಗಿದೆ. ಕೇಂದ್ರ ಸರ್ಕಾರ ಈ ದೇಶದ ಅತಿ ಶ್ರೀಮಂತ ಉದ್ಯಮಪತಿಗಳಾದ ಅದಾನಿ, ಅಂಬಾನಿಗಳ ಜೊತೆಗೂಡಿ ರೈತರ ಭೂಮಿ ಮತ್ತು ಬೆಳೆಯ ಮೇಲೆ ನಿಯಂತ್ರಣ ಸಾಧಿಸಲು ರೈತ ವಿರೋಧಿ ಮೂರು ಕೃಷಿ ಕಾಯ್ದೆಗಳನ್ನು ತಂದಿತ್ತು. ಕೇಂದ್ರ ಸರ್ಕಾರ ರೈತ ಪರ ಐತಿಹಾಸಿಕ ಹೋರಾಟದ ಸಂದರ್ಭದಲ್ಲಿ ಲಿಖಿತ ರೂಪದಲ್ಲಿ ಕೊಟ್ಟಿದ್ದ ಭರವಸೆಯನ್ನು ಇದೂವರೆಗೂ ಈಡೇರಿಸಿರುವುದಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಚುನಾವಣೆ ಸಂದರ್ಭದಲ್ಲಿ ಕೊಟ್ಟಂತಹ ಮಾತನ್ನು ಮರೆತು ದ್ರೋಹ ಎಸಗಿದೆ.
ರಾಜ್ಯದ ಕಾಂಗ್ರೇಸ್ ಸರ್ಕಾರ ಪ್ರಣಾಳಿಕೆಯಲ್ಲಿ ಈ ಹಿಂದಿನ ಬಿ.ಜೆ.ಪಿ. ಸರ್ಕಾರ ತಂದಿದ್ದ ಕೃಷಿ ಕಾಯ್ದೆಗಳನ್ನು ವಾಪಸ್ಸು ಪಡೆಯುವುದಾಗಿ ಮತ್ತು ಅನೇಕ ರೈತಪರವಾದ ವಿಚಾರಗಳನ್ನು ಹೇಳಿದ್ದರು. ಇಲ್ಲಿಯವರೆಗೂ ಯಾವದನ್ನು ಕಾರ್ಯಗತಗೊಳಿಸಿರುವುದಿಲ್ಲ. ರೈತರ, ಕಾರ್ಮಿಕರ, ಶೋಷಿತರ ಹಾಗೂ ಜನ ಸಾಮಾನ್ಯರ ಸಮಸ್ಯೆಗಳನ್ನು ಬಗೆಹರಿಸುವ ಜವಾಬ್ದಾರಿಯನ್ನು ಮರೆತು ಆಡಳಿತ ಮತ್ತು ವಿರೋಧ ಪಕ್ಷಗಳು ಭ್ರಷ್ಟಾಚಾರದ ವಿಚಾರವಾಗಿ ಪರಸ್ಪರ ಒಬ್ಬರ ಮೇರು ಆರೋಪ ಮಾಡುವುದರಲ್ಲಿ ಕಾಲವನ್ನು ಕಳೆಯುತ್ತಿದ್ದಾರೆ.
ರಾಜ್ಯದ ರೈತರು, ಜನ ಸಾಮಾನ್ಯರು ಎದುರುಸುತ್ತಿರುವ ಸಮಸ್ಯೆಗಳನ್ನು ಚರ್ಚಿಸಿ ಪರಿಹಾರವನ್ನು ಕಂಡುಕೊಳ್ಳಲು ತಕ್ಷಣದಿಂದಲೇ ಮಾನ್ಯ ಮುಖ್ಯಮಂತಿಗಳು, ಸಂಭಂಧಪಟ್ಟ ಸಚಿವರುಗಳು ಹಾಗೂ ಅಧಿಕಾರಿಗಳು ಹಾಗೂ ಎಲ್ಲಾ ಸಂಘಟನೆಗಳ ಮುಖಂಡರುಗಳನ್ನು ಒಳಗೊಂಡಂತೆ ಜನತಾ ಅಧಿವೇಶನವನ್ನು ಕರೆಯಬೇಕು.
ಹಾಗಾಗಿ ನಮ್ಮ ಹಕ್ಕುತ್ತಾಯಗಳಿಗೆ ಸರ್ಕಾರ ಸ್ಪಂದಿಸದೇ ಇದ್ದರೆ ತೀವ್ರ ಸ್ವರೂಪದ ಹೋರಾಟವನ್ನು ರೂಪಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಹಕ್ಕುತ್ತಾಯಗಳು:
1. ಸ್ವಾಮಿನಾಥನ್ ಕಾಯ್ದೆಯಾಗಬೇಕು. ವರದಿ ಆಧರಿಸಿ ಕೃಷಿ ಉತ್ಪನ್ನಗಳಿಗೆ ಕನಿಷ್ಟ ಬೆಂಬಲ ಬೆಲೆ ನೀಡಬೇಕು.
2. ರಾಜ್ಯ ಸರ್ಕಾರ ವಿದ್ಯುತ್ ಖಾಸಗೀಕರಣ ಮಾಡಬಾರದು, ಕೇಂದ್ರ ಸರ್ಕಾರ ವಿದ್ಯುತ್ ಖಾಸಗೀಕರಣ ಮಾಡುವುದಿಲ್ಲ ಎಂದು ಘೋಷಿಸಬೇಕು,
3. ಕೃಷಿ ಐ.ಪಿ ಸೆಟ್ ಗಳಿಗೆ ಆಧಾರ ನಂಬರ್ ಜೋಡಣೆಯನ್ನು ಕೂಡಲೇ ಕೈಬಿಡಬೇಕು,
4. ಬೆಳೆ ವಿಮೆ ಕಂಪೆನಿಗಳ ಪರವಾಗಿದ್ದು, ರೈತರ ಬೆಳೆನಷ್ಟಕ್ಕೆ ಸೂಕ್ತ ಪರಿಹಾರ ಸಿಗುತ್ತಿಲ್ಲ. ಹಾಗಾಗಿ ರೈತರಿಗೆ ನಷ್ಟಕ್ಕೆ ಸರಿಯಾದ ಬೆಳೆ ವಿಮೆ ನೀಡುವಂತೆ ಜಾರಿಯಾಗಬೇಕು.
5. ಅತಿವೃಷ್ಟಿ, ಅನಾವೃಷ್ಠಿ, ಬರಗಾಲ ಪರಿಹಾರ ಹಾಗೂ ಕಾಡುಪ್ರಾಣಿಗಳಿಂದ ನಿರಂತಹ ಆಗುವ ಬೆಳೆಹಾನಿ ಮಾರ್ಗಸೂಚಿ ದರ ಹೆಚ್ಚಿಸಬೇಕು ಹಾಗೂ ತಕ್ಷಣವೇ ಪರಿಹಾರ ನೀಡಬೇಕು.
6. ಕೃಷಿ ಉಪರಕರಣಗಳ ಮೇಲಿನ ಜಿ.ಎಸ್.ಟಿ. ರದ್ದು ಮಾಡಬೇಕು
7. ರಾಷ್ಟ್ರೀಕೃತ ಬ್ಯಾಂಕ್ ಗಳು ರೈತರಿಗೆ ಸಾಲ ನೀಡುವಾಗ ಸಿಬಿಲ್ ಪರಿಗಣಿಸುತ್ತಿರುವುದನ್ನು ತೆಗೆದುಹಾಕಬೇಕು.
8. ರೈತರ ರಾಷ್ಟ್ರೀಕೃತ, ಸಹಕಾರಿ ಬ್ಯಾಂಕ್ ಗಳ, ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು.
9. ಕಸ್ತೂರಿ ರಂಗನ್ ವರದಿ ಅವೈಜ್ಞಾನಿಕ ಹಾಗೂ ಅಸಂವಿಧಾನವಾಗಿದ್ದು, ಸಂಪೂರ್ಣ ತೀರಸ್ಮರಿಸಬೇಕು.
10. ಮಲೆನಾಡು ಭಾಗದಲ್ಲಿ ಅತಿವೃಷ್ಟಿಯಿಂದ ಕಾಫಿ, ಕಾಳುಮೆಣಸು, ಅಡಿಕೆ ಬೆಳೆಗಳು ನಾಶವಾಗಿದ್ದು, ರೈತ ಬೆಳೆಗಾರರು ಸಂಕಷ್ಟಕ್ಕೆ ಗುರಿಯಾಗಿದ್ದು, ಕೂಡಲೇ ವೈಜ್ಞಾನಿಕ ಪರಿಹಾರ ನೀಡಬೇಕು.
11. ಬಯಲು ಭಾಗದಲ್ಲಿ, ಈರುಳ್ಳಿ, ಆಲೂಗೆಡ್ಡೆ, ಜೋಳ, ರಾಗಿ, ಇತ್ಯಾದಿ ಆಹಾರ ಬೆಳೆಗಳು, ಅತಿವೃಷ್ಟಿ, ಅನಾವೃಷ್ಟಿಯಿಂದ ಬೆಳೆ ಹಾನಿಯಾಗಿದ್ದು, ಸೂಕ್ತ ಪರಿಹಾರ
12. ಸರ್ಕಾರಿ ಭೂಮಿಯನ್ನು ಸಾಗುವಳಿ ಮಾಡುತ್ತಿರುವ ಫಾರಂ ನಂ: 50, 53, 57 ರಲ್ಲಿ ರೈತರಿಗೆ ಭೂ ಮಂಜೂರಾತಿ ಮೂಲಕ ಹಕ್ಕು ಪತ್ರ ನೀಡಬೇಕು.
13. ಬಗರ್ ಹುಕ್ಕುಂ ರೈತರ ಹಾಗೂ ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡಿರುವ ಬಡವರ ನಿವೇಶನವನ್ನು 94ಸಿ ಅಡಿಯಲ್ಲಿ ಸಕ್ರಮಗೊಳಿಸಿಬೇಕು.
14. ರಾಷ್ಟ್ರೀಕೃತ ಬ್ಯಾಂಕ್ ಗಳು ಕೇಂದ್ರ ಸರ್ಕಾರ 2002 (ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳ ಹರಾಜಿನ ಕಾಯ್ದೆ) ರಲ್ಲಿ ತಂದಿರುವ ಸರ್ಫೇಸಿ ಕಾಯ್ದೆಯನ್ನು ಬಳಸಿಕೊಂಡು ಸಾಲ ವಸೂಲಾತಿಗೆ ಕಾಫಿ ತೋಟವನ್ನು ಇ-ಹರಾಜು ಮಾಡುತ್ತಿರುವುದನ್ನು ಕೂಡಲೇ ನಿಲ್ಲಿಸಬೇಕು.
15. ಕಾಫಿ ಕೃಷಿ ಬೆಳೆಯಾಗಿರುವುದಲ್ಲದೇ, ಸಾಲ ನೀಡಿರುವುದು ಕೃಷಿ ಅಭಿವೃದ್ಧಿ ಮತ್ತು ಬೆಳೆ ಸಾಲ ಸರ್ಫೇಸಿ ಕಾಯ್ದೆ ನಿಯಮಗಳನ್ನು ಕಾಫಿ ಬೆಳೆಯುವ ರೈತ ಬೆಳೆಗಾರರ ಮೇಲೆ ಪ್ರಯೋಗ ಮಾಡುತ್ತಿರುವುದು ರೈತ ವಿರೋಧಿಯಾಗಿದೆ.
16. ಕಾಡಾನೆ, ಕಾಡುಕೋಣ, ಮಂಗಗಳು ಇತ್ಯಾದಿ ಕಾಡುಪ್ರಾಣಿಗಳ ಹಾವಳಿಯಿಂದ ನಿರಂತರ ಬೆಳೆನಷ್ಟ ಉಂಟಾಗುತ್ತಿದ್ದು, ಕಾಡುಪ್ರಾಣಿಗಳ ಹಾವಳಿಯನ್ನು ತಪ್ಪಿಸಲು ಶಾಶ್ವತ ಯೋಜನೆ ಜಾರಿಯಾಗಬೇಕು.
17. ಬಿ.ಜೆ.ಪಿ. ಸರ್ಕಾರ ಜಾರಿಗೊಳಿಸಿದ ಭೂ ಸುಧಾರಣೆ ಕಾಯ್ದೆ, ಎ.ಪಿ.ಎಂ. ಸಿ. ಕಾಯ್ದೆ, ಭೂ ಸ್ವಾಧೀನಾ ಕಾಯ್ದೆ ರದ್ದುಗೊಳಿಸಬೇಕು.
18. ವಕ್ಸ್ ಕಾಯ್ದೆಯಿಂದ ರೈತರಿಗೆ ಯಾವುದೇ ತೊಂದರೆಯಾಗದಂತೆ ಸೂಕ್ತ ತಿದ್ದುಪಡಿ ತರಬೇಕು.
ಎಂದು ಮನವಿ ಪತ್ರದಲ್ಲಿ ಒತ್ತಾಯಿಸಲಾಗಿದೆ. ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷರಾದ ಡಿ.ಆರ್. ದುಗ್ಗಪ್ಪಗೌಡ , ಮೂಡಿಗೆರೆ ತಾಲ್ಲೂಕು ಅಧ್ಯಕ್ಷ ಎಸ್.ಪಿ. ರಾಜು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೃಷಭರಾಜ್, ಜಿಲ್ಲಾ ಸಂಚಾಲಕ ಸಂತೋಷ್, ನಿರಂಜನಮೂರ್ತಿ, ಬಸವರಾಜಪ್ಪ, ಓಂಕಾರಪ್ಪ, ಎನ್.ಎಸ್. ರಾಮಚಂದ್ರೇಗೌಡ, ಗೌಸ್ ಮೊಹಿಯುದ್ದೀನ್, ಸುರೇಶ್ ಭಟ್ ಮುಂತಾದವರು ಇದ್ದರು.


