ರಾಜ್ಯದಾದ್ಯಂತ ಯೂರಿಯಾ ರಸಗೊಬ್ಬರದ ಅಭಾವದಿಂದ ರೈತರು ಪರದಾಡುತ್ತಿರುವ ನಡುವೆಯೇ ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಕ್ರಮವಾಗಿ ಯೂರಿಯಾ ರಸಗೊಬ್ಬರ ಸಂಗ್ರಹಿಸಿಟ್ಟಿದ್ದ ಪ್ರಕರಣವನ್ನು ಭೇದಿಸಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಸಿಗೋಡು ಗ್ರಾಮದಲ್ಲಿರುವ ಸುಭಾಷ್‌ನಗರ ಪ್ರದೇಶದಲ್ಲಿ 5 ಲಕ್ಷ ರೂ. ಮೌಲ್ಯದ 299 ಚೀಲ ಯೂರಿಯಾ ರಸಗೊಬ್ಬರ ವಶಪಡಿಸಿಕೊಂಡಿದ್ದು, ಓರ್ವನನ್ನು ಬಂಧಿಸಲಾಗಿದೆ.
ರಸಗೊಬ್ಬರ ಮಾರಾಟ ಪರವಾನಗಿ ಅಥವಾ ಇ-ವೇ ಬಿಲ್‌ಗಳಿಲ್ಲದೇ, ಸುಭಾಷ್‌ನಗರದ ಮನೆಯೊಂದರ ಮುಂಭಾಗ ಲಾರಿ (ವಾಹನ ಸಂಖ್ಯೆ ಕೆ.ಎ.03 ಎಎ 3924)ಯಲ್ಲಿ 220 ಯೂರಿಯಾ ರಸಗೊಬ್ಬರ ಚೀಲಗಳನ್ನು ಲೋಡ್ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಅದೇ ಮನೆಯ ಗೋದಾಮಿನಲ್ಲಿ ಇನ್ನೂ 79 ಯೂರಿಯಾ ಚೀಲಗಳನ್ನು ಕಾನೂನು ಬಾಹಿರವಾಗಿ ದಾಸ್ತಾನಿರಿಸಿರುವುದು ಪತ್ತೆಯಾಗಿದೆ.
ರಸಗೊಬ್ಬರ ನಿಯಂತ್ರಣ ಆದೇಶ 1985 (ಕಲಂ 7 ಮತ್ತು 8) ಹಾಗೂ ಅಗತ್ಯ ವಸ್ತುಗಳ ಕಾಯ್ದೆ 1955ರ ಉಲ್ಲಂಘನೆಯಾಗಿರುವ ಕಾರಣ ಒಟ್ಟು 299 (ಅಂದಾಜು ರೂ. 5 ಲಕ್ಷ ಮೌಲ್ಯ) ಯೂರಿಯಾ ಚೀಲಗಳನ್ನು ಕೃಷಿ ಇಲಾಖಾಧಿಕಾರಿಗಳು ಜಪ್ತಿ ಮಾಡಿಕೊಂಡಿದ್ದಾರೆ.
ಜಪ್ತಿಯಾದ ರಸಗೊಬ್ಬರವನ್ನು ಬಾಳೆಹೊನ್ನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಗೋದಾಮಿನಲ್ಲಿ ಸುರಕ್ಷಿತವಾಗಿ ದಾಸ್ತಾನಿರಿಸಲಾಗಿದ್ದು, ಮಾದರಿಗಳನ್ನು ವಿಧಾಯಕ ಹಾಗೂ ಗುಣಮಟ್ಟ ಪರೀಕ್ಷೆಗಾಗಿ ಸಂಗ್ರಹಿಸಲಾಗಿದೆ.
ಅಕ್ರಮ ಸಾಗಾಟಕ್ಕೆ ಬಳಸುತ್ತಿದ್ದ ಲಾರಿ ಮತ್ತು ಮಾಲೀಕ ವಿಲ್ಫ್ರೆಡ್ ಕ್ಲೋಡ್ ಲೋಬೊ ಎಂಬಾತನನ್ನು ಬಾಳೆಹೊನ್ನೂರು ಪೊಲೀಸ್ ಠಾಣಾಧಿಕಾರಿಗಳಿಗೆ ಒಪ್ಪಿಸಲಾಗಿದೆ.
ಜಾರಿದಳದ ಸಹಾಯಕ ಕೃಷಿ ನಿರ್ದೇಶಕ ತಿಮ್ಮನಗೌಡ ಎಸ್.ಪಾಟೀಲ್ ನೀಡಿರುವ ದೂರಿನ ಮೇರೆಗೆ ಬಾಳೆಹೊನ್ನೂರು ಠಾಣೆಯ ಪಿಎಸ್‌ಐ ರವೀಶ್ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ.
ರೈತರಿಗೆ ಸರ್ಕಾರದ ಮೂಲಕ ಸರಿಯಾದ ದರದಲ್ಲಿ ಗುಣಮಟ್ಟದ ರಸಗೊಬ್ಬರ ದೊರಕಿಸಿಕೊಡಲು ಜಿಲ್ಲಾಡಳಿತ ಬದ್ಧವಾಗಿದ್ದು, ಇಂತಹ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟಲು ಪೊಲೀಸ್ ಹಾಗೂ ಕೃಷಿ ಇಲಾಖೆಯ ಜಂಟಿ ಪರಿಶೀಲನೆ ಮುಂದುವರೆಯಲಿದೆ.
ಅಕ್ರಮ ದಾಸ್ತಾನು, ಸಾಗಾಟ ಅಥವಾ ಮಾರಾಟದಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ.



