ananth m s

 

 

ಧರ್ಮಸ್ಥಳದಲ್ಲಿ  ಮೂವರು ಯೂಟ್ಯೂಬರ್‌ಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವುದು ಖಂಡನೀಯ. ಈ ಘಟನೆಯಿಂದಾಗಿ ಧರ್ಮಸ್ಥಳದಂತಹ ಪ್ರಮುಖ ಧಾರ್ಮಿಕ ಕ್ಷೇತ್ರದ ಪಾವಿತ್ರ್ಯತೆಗೆ ಧಕ್ಕೆ ಉಂಟಾಗಿದೆ. ಈ ಘಟನೆಗೆ ಪೊಲೀಸ್ ಇಲಾಖೆಯ ವೈಫಲ್ಯವೇ ಕಾರಣವಾಗಿದ್ದು, ಮಾಧ್ಯಮದವರ ಮೇಲೆ ಗೂಂಡಾಗಿರಿ ಮೆರೆದಿರುವ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಬೇಕು ಎಂದು ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ವಕ್ತಾರ ಎಂ.ಎಸ್.ಅನಂತ್ ಒತ್ತಾಯಿಸಿದ್ದಾರೆ.

ಗುರುವಾರ ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಿದ್ದೇನೆ ಎಂದು ಅನಾಮಿಕ ವ್ಯಕ್ತಿಯೊಬ್ಬರು ನೀಡಿರುವ ದೂರಿನ ಮೇರೆಗೆ ಎಸ್‌ಐಟಿ ಪೊಲೀಸ್ ಅಧಿಕಾರಿಗಳ ತಂಡ ಈಗಾಗಲೇ ತನಿಖೆ ಆರಂಭಿಸಿದ್ದು, 13 ಸ್ಥಳಗಳಲ್ಲಿ ಉತ್ಖನನ ನಡೆಸಿ ಸಿಕ್ಕಿರುವ ಅಸ್ಥಿಗಳನ್ನು ಸಂಗ್ರಹಿಸಿ ಎಫ್‌ಎಸ್‌ಎಲ್‌ಗೆ ಕಳುಹಿಸಿದ್ದಾರೆ. ಪತ್ತೆಯಾಗಿರುವ ಅಸ್ತಿಗಳ ಡಿಎನ್‌ಎ ಪರೀಕ್ಷೆ ಬಳಿಕ ಅನಾಮಿಕ ವ್ಯಕ್ತಿ ಹೂತು ಹಾಕಿರುವ ಶವಗಳು ಕೊಲೆಗೀಡಾಗಿದ್ದವರದ್ದೇ?, ನಾಪತ್ತೆಯಾದವರ ಅಸ್ಥಿಗಳೇ, ಅತ್ಯಾಚಾರಕ್ಕೊಳಗಾದವರದ್ದೇ ಎಂಬುದು ತಿಳಿದು ಬರಬೇಕಿದೆ.

ಎಸ್‌ಐಟಿ ತನಿಖೆ ಸಂದರ್ಭದಲ್ಲಿ ಕೆಲ ಗೂಂಡಾಗಳು ಸ್ಥಳದಲ್ಲಿ ವರದಿಗೆ ಬಂದಿದ್ದ ಯೂಟ್ಯೂಬರ್‌ಗಳು ಹಾಗೂ ಖಾಸಗಿ ಸುದ್ದಿ ವಾಹಿನಿಯೊಂದರ ವರದಿಗಾರನ ಮೇಲೆ ಹಲ್ಲೆ ಮಾಡಿರುವುದು ವರದಿಯಾಗಿದೆ. ಈ ಪೈಕಿ ಮೂವರು ಸ್ವತಂತ್ರ ಪತ್ರಕರ್ತರ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಲಾಗಿದೆ. ಇದು ಅಕ್ಷಮ್ಯ ಅಪರಾಧ ಕೃತ್ಯವಾಗಿದ್ದು, ಕಾನೂನು ಸುವ್ಯವಸ್ಥೆಗೆ ಭಂಗ ತಂದು ಪ್ರಕರಣದ ದಿಕ್ಕು ತಪ್ಪಿಸುವ ಹುನ್ನಾರವೂ ಆಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಧರ್ಮಸ್ಥಳ ನಾಡಿನ ಹೆಸರಾಂತ ಪುಣ್ಯ ಕ್ಷೇತ್ರವಾಗಿದೆ. ಈ ಕ್ಷೇತ್ರದ ಮುಖ್ಯಸ್ಥರ ಮೇಲೆ ಗಂಭೀರ ಆರೋಪವನ್ನು ಹೊರಿಸಿರುವುದನ್ನು ಸಹಿಸಲು ಸಾಧ್ಯವಾಗುತ್ತಿಲ್ಲ, ಬೆಂಕಿ ಇಲ್ಲದೇ ಹೊಗೆಯಾಡುವುದಿಲ್ಲ ಎಂಬಂತೆ ಅಲ್ಲಿ ಏನೋ ನಡೆದಿದೆ ಎಂಬ ಎಂಬ ಆರೋಪದ ಹಿನ್ನೆಲೆಯಲ್ಲಿ ಸದ್ಯ ನಾಡಿನಾದ್ಯಂತ ಗುಮಾನಿ ವ್ಯಕ್ತವಾಗುತ್ತಿದೆ. ಅಲ್ಲಿ ಕೆಲ ವ್ಯಕ್ತಿಗಳನ್ನು ಕೊಲೆ ಮಾಡಲಾಗಿದೆ, ಕೆಲ ಯುವತಿಯರನ್ನು ಅತ್ಯಾಚಾರ ಮಾಡಲಾಗಿದೆ, ಅಪ್ರಾಪ್ತ ವಯಸ್ಸಿನವರ ಮೇಲೂ ಅತ್ಯಾಚಾರ ಕೃತ್ಯ ಎಸಗಿ ಗುಪ್ತವಾಗಿ ಹೂಳಲಾಗಿದೆ ಎಂಬ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ಕೆಲ ಸ್ವತಂತ್ರ ಪತ್ರಕರ್ತರು, ಸಾಮಾಜಿಕ ಹೋರಾಟಗಾರರು ಕಳೆದೊಂದು ದಶಕದಿಂದ ತನಿಖೆಗೆ ಆಗ್ರಹಿಸುತ್ತಿದ್ದಾರೆ. ಅಲ್ಲದೇ ಸೌಜನ್ಯ ಹತ್ಯೆ ಪ್ರಕರಣದಲ್ಲಿ ಇದುವರೆಗೂ ಆರೋಪಿ ಯಾರೆಂದು ಗೊತ್ತಾಗದ ಹಿನ್ನೆಲೆಯಲ್ಲಿ ಆರೋಪಿಗಳ ಪತ್ತೆಗೆ ವ್ಯಾಪಕ ಕೂಗು ಎದ್ದಿದೆ.

ಈ ಗೊಂದಲಗಳಿಗೆ ತೆರೆ ಎಳೆಯುವ ಉದ್ದೇಶದಿಂದ ರಾಜ್ಯ ಸರಕಾರ ಎಸ್‌ಐಟಿ ನೇಮಿಸಿ ತನಿಖೆಗೆ ಆದೇಶಿಸಿದೆ. ಎಸ್‌ಐಟಿ ಇದುವರೆಗೂ ನಿಷ್ಪಕ್ಷಪಾತ ತನಿಖೆಯನ್ನೂ ನಡೆಸುತ್ತಿದೆ. ಈ ಹಂತದಲ್ಲಿ ಕೆಲ ಗೂಂಡಾ ಮನೋಸ್ಥಿತಿಯ ಗುಂಪು ಸೌಜನ್ಯ ಮನೆ ಸಮೀಪದಲ್ಲಿ ಮೂವರು ಯೂಟ್ಯೂಬರ್‌ಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವುದು ಧರ್ಮಸ್ಥಳದ ಪಾವಿತ್ರ್ಯತೆಗೆ ಧಕ್ಕೆ ತರಲು ಮಾಡಿರುವ ಹುನ್ನಾರವಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಈ ಪ್ರಕರಣ ಅತ್ಯಂತ ಸೂಕ್ಷ್ಮ ಪ್ರಕರಣವಾಗಿದೆ. ಧರ್ಮಸ್ಥಳ ಕ್ಷೇತ್ರ ರಾಜ್ಯ, ದೇಶ ಹಾಗೂ ಇಡೀ ವಿಶ್ವದಾದ್ಯಂತ ಭಕ್ತರನ್ನು ಹೊಂದಿದೆ. ಈ ಕ್ಷೇತ್ರದ ಮುಖ್ಯಸ್ಥರ ಮೇಲೆ ಕೇಳಿ ಬಂದಿರುವ ಆರೋಪದಿಂದಾಗಿ ಭಕ್ತರ ಸಹನೆಯ ಕಟ್ಟೆಯೂ ಒಡೆದಿದೆ, ಆದರೂ ಭಕ್ತರ್ಯಾರು ಇದುವರೆಗೂ ತನಿಖೆಯ ವಿರುದ್ಧ ಧ್ವನಿ ಎತ್ತಿಲ್ಲ. ಆರೋಪ ಸತ್ಯವೋ ಸುಳ್ಳೋ ಎಂಬುದು ಜಗತ್ತಿಗೆ ತಿಳಿಯಲಿ ಎಂದು ಅವರೂ ಭಾವಿಸಿ ಎಸ್‌ಐಟಿ ತನಿಖೆ ಪಾರದರ್ಶಕವಾಗಿ ನಡೆಯಲಿ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಧರ್ಮಸ್ಥಳ ಕ್ಷೇತ್ರದ ಮುಖ್ಯಸ್ಥರೂ ಈ ತನಿಖೆಯನ್ನು ಸ್ವಾಗತಿಸಿದ್ದಾರೆ.

ಈ ಮಧ್ಯೆ ಎಸ್‌ಐಟಿ ನಡೆಸುತ್ತಿರುವ ಉತ್ಖನದ ವರದಿ ಮಾಡಲು ಬಂದಿದ್ದ ಮಾಧ್ಯಮದವರ ಮೇಲೆ ಕೆಲ ಗೂಂಡಾಗಳು ನಡೆಸಿರುವ ಹಲ್ಲೆಯ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿರುವುದು ಸ್ಪಷ್ಟವಾಗುತ್ತಿದೆ. ಈ ಹಲ್ಲೆ ಮೂಲಕ ಸ್ಥಳದಲ್ಲಿ ಪ್ರಕ್ಷುಬ್ಧ ವಾತಾವರಣ ಸೃಷ್ಟಿಸಿ ತನಿಖೆಯ ದಿಕ್ಕು ತಪ್ಪಿಸುವ ಸಂಚು ನಡೆಸಿರುವ ಶಂಕೆ ವ್ಯಕ್ತವಾಗುತ್ತಿದೆ. ಈ ಮೂಲಕ ಧರ್ಮಸ್ಥಳದಂತಹ ಸ್ಥಳದಲ್ಲಿ ಶಾಂತಿ, ಸಾಮರಸ್ಯದಿಂದ ಬದುಕುತ್ತಿರುವ ಎಲ್ಲ ಸಮುದಾಯದ ಜನರಲ್ಲಿ ಭೀತಿ, ಆತಂಕ ಮೂಡಿಸಿ ಧರ್ಮಸ್ಥಳ ಕ್ಷೇತ್ರಕ್ಕೆ ಕಳಂಕ ತರುವುದು ಈ ಗೂಂಡಾ ಮನಸ್ಥಿತಿಯವರ ಉದ್ದೇಶವಾಗಿದೆ.

ಪ್ರಕರಣದ ಸೂಕ್ಷ್ಮತೆಯ ಅರಿವಿದ್ದರೂ ಪೊಲೀಸ್ ಇಲಾಖೆ ಅಲ್ಲಿ ಹೆಚ್ಚಿನ ಭದ್ರತೆ ಒದಗಿಸದಿರುವುದು ಮಾಧ್ಯಮದವರ ಮೇಲಿನ ಹಲ್ಲೆಗೆ ಕಾರಣವಾಗಿದೆ. ಪೊಲೀಸ್ ಇಲಾಖೆ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಬೇಕು, ಮಾಧ್ಯಮದವರ ಮೇಲೆ ಹಲ್ಲೆ ಮಾಡಿದ ಗೂಂಡಾಗಳ ಮೇಲೆ ಕಠಿಣ ಕಾನೂನು ಕ್ರಮವಹಿಸಬೇಕು, ಮಾಧ್ಯಮದವರಿಗೆ ಹೆಚ್ಚಿನ ಭದ್ರತೆ ಒದಗಿಸಬೇಕು. ಹಲ್ಲೆ ಮಾಡಿರುವ ಆರೋಪಿಗಳು ಧರ್ಮಸ್ಥಳದ ಭಕ್ತರಾಗಿರಲು ಸಾಧ್ಯವೇ ಇಲ್ಲ, ಈ ಹಲ್ಲೆ ಪ್ರಕರಣದ ಹಿಂದೆ ಕಾಣದ ಕೈಗಳಿರುವುದು ಸ್ಪಷ್ಟವಾಗುತ್ತಿದ್ದು, ತನಿಖೆ ಮೂಲಕ ಅವರನ್ನೂ ಶಿಕ್ಷೆಗೆ ಗುರಿಪಡಿಸಬೇಕು, ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಹತ್ಯೆ, ಅತ್ಯಾಚಾರ ಪ್ರಕರಣದ ನಿಷ್ಪಕ್ಷಪಾತ ತನಿಖೆ ನಡೆಸಿ ಸತ್ಯಾಂಶವನ್ನು ಜನರ ಮುಂದಿಡಬೇಕು ಎಂದು ಅವರು ಆಗ್ರಹಿಸಿದ್ದಾರೆ

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ