ಮರ ಕಡಿಯುವ ವೇಳೆ ಸಂಭವಿಸಿದ ದುರ್ಘಟನೆಗೆ ಕಾರ್ಮಿಕನೋರ್ವ ಸ್ಥಳದಲ್ಲೇ ಕೊನೆಯುಸಿರೆಳೆದ ಘಟನೆ ನಡೆದಿದೆ. ಮೂಡಿಗೆರೆ ತಾಲ್ಲೂಕು ಗೋಣಿಬೀಡು ಗ್ರಾಮದಲ್ಲಿ ಗುರುವಾರ ಮಧ್ಯಾಹ್ನ ಈ ಅವಘಡ ಸಂಭವಿಸಿದೆ.
ಮೂಡಿಗೆರೆ ಸಮೀಪದ ಕೃಷ್ಣಾಪುರ ಗ್ರಾಮದ ಪ್ರಕಾಶ್ (48) ಮೃತ ದುರ್ದೈವಿ. ವೃತ್ತಿಯಿಂದ ಟಿಂಬರ್ ಕೆಲಸ ಮಾಡುತ್ತಿದ್ದ ಪ್ರಕಾಶ್ ಗುರುವಾರ ಬೆಳಿಗ್ಗೆ ಸಹೋದ್ಯೋಗಿಗಳೊಂದಿಗೆ ಗೋಣಿಬೀಡು ಸಮೀಪದ ಕಾಫಿ ತೋಟವೊಂದರಲ್ಲಿ ಸಿಲ್ವರ್ ಮರ ಕಡಿಯಲು ತೆರಳಿದ್ದರು. ಸುಮಾರು 70-80 ಅಡಿ ಎತ್ತರದ ಸಿಲ್ವರ್ ಮರವನ್ನು ತಾವೇ ಯಂತ್ರದಿಂದ ಕೊಯ್ಯುವ ಕಾರ್ಯದಲ್ಲಿ ನಿರತರಾಗಿದ್ದರು.
ಮರ ನೆಲಕ್ಕುರುಳುವ ಸಮಯದಲ್ಲಿ ಕಾರ್ಮಿಕರು ಎಲ್ಲರಿಗೂ ಎಚ್ಚರಿಕೆ ಸೂಚನೆ ನೀಡಿ ದೂರ ಸರಿಯಲು ಪ್ರಕಾಶ್ ಹೇಳಿದ್ದರು. ಆದರೆ ಪ್ರಕಾಶ್ ಓಡುವಾಗ ತಾನೇ ಕಾಲು ಜಾರಿ ಆಯಾ ತಪ್ಪಿ ಬಿದ್ದರು ಎನ್ನಲಾಗಿದೆ. ಕ್ಷಣಾರ್ಧದಲ್ಲಿ ಮೇಲಿಂದ ಬಿದ್ದ ಭಾರೀ ಮರದ ಕೊಂಬೆಯೊಂದು ಅವರ ತಲೆಗೆ ಬಡಿದಿದೆ.
ಮರದ ಕೊಂಬೆ ಬಡಿದ ರಭಸಕ್ಕೆ ಸ್ಥಳದಲ್ಲೇ ಅವರು ಪ್ರಾಣ ಕಳೆದುಕೊಂಡಿದ್ದಾರೆ. ಸಹೋದ್ಯೋಗಿಗಳು ಹಾಗೂ ಗ್ರಾಮಸ್ಥರು ತಕ್ಷಣವೇ ನೆರವಿಗೆ ಬಂದರೂ, ಆಗಲೇ ಪ್ರಕಾಶ್ ಅವರ ಪ್ರಾಣ ಪಕ್ಷಿ ಹಾರಿಹೋಗಿತ್ತು.
ಕೃಷ್ಣಾಪುರ ಗ್ರಾಮದ ಪ್ರಕಾಶ್ ಪತ್ನಿ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಇವರು ಕುಟುಂಬದ ಏಕೈಕ ಆಧಾರವಾಗಿದ್ದರು. ಪ್ರಕಾಶ್ ಅವರು ಕಾರ್ಮಿಕ ಮುಖಂಡರು ಆಗಿದ್ದರು ಸಿಪಿಐ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು. ಇವರು ಅಪಾರ ದೈವಭಕ್ತರಾಗಿದ್ದರು, ಕೆಲ ದಿನಗಳಲ್ಲಿ ಅಯ್ಯಪ್ಪಸ್ವಾಮಿ ಮಾಲೆ ಹಾಕಿ ಶಬರಿಮಲೆಗೆ ಹೋಗುವ ತಯಾರಿ ನಡೆಸಿದ್ದರು.
ಪ್ರಕಾಶ್ ಅವರ ಸಾವಿಗೆ ಸ್ನೇಹಿತರು, ಬಂಧುಗಳು, ರಾಜಕೀಯ ಪಕ್ಷದ ಮುಖಂಡರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



