ಚಿಕ್ಕಮಗಳೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನಿಂದ 2025-26ನೇ ಸಾಲಿಗೆ ಶೇ.3 ರ ಬಡ್ಡಿದರದಲ್ಲಿ 30 ಕೋಟಿ ಮಧ್ಯಮಾವಧಿ ಸಾಲ ನೀಡುವ ಯೋಜನೆ ಜೊತೆಗೆ ಪ್ರಸ್ತುತ ಇರುವ ನಿವ್ವಳ ಲಾಭವನ್ನು 8 ಕೋಟಿ ರೂಗಳಿಗೆ ಹೆಚ್ಚಿಸಲು ಗುರಿ ಹೊಂದಲಾಗಿದೆ ಎಂದು ಬ್ಯಾಂಕಿನ ಅಧ್ಯಕ್ಷ ಡಿ.ಎಸ್. ಸುರೇಶ್ ತಿಳಿಸಿದರು.
ಅವರು ಗುರುವಾರ ಬ್ಯಾಂಕಿನ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ರಾಜ್ಯ ಬಜೆಟ್‌ನಲ್ಲಿ ತಿಳಿಸಲಾಗಿರುವಂತೆ ಜಿಲ್ಲೆಗೆ ಹಾಲು ಉತ್ಪಾದಕ ಘಟಕ ಸ್ಥಾಪಿತವಾದಲ್ಲಿ ರೈತಾಪಿ ವರ್ಗದವರಿಗೆ ಹೆಚ್ಚು ಹೆಚ್ಚು ಹಾಲು ಸಂಗ್ರಹಣೆ ಮಾಡಲು ದುಡಿಯುವ ಬಂಡವಾಳ ರೂಪದಲ್ಲಿ 35 ಕೋಟಿ ರೂ ಸಾಲಸೌಲಭ್ಯ ನೀಡಲು ಉದ್ದೇಶಿಸಲಾಗಿದೆ ಎಂದರು.
ರಾಜ್ಯ ಹಾಗೂ ಕೇಂದ್ರಸರ್ಕಾರ ಜಾರಿಗೊಳಿಸಿದ ಪ್ಯಾಕ್ಸ್ ಎಮ್.ಎಸ್.ಸಿ ಯೋಜನೆಯಡಿ 32 ಕೋಟಿ ಸಾಲ ಮಂಜೂರು ಮಾಡಲಾಗಿದ್ದು, ಇನ್ನೂ ಹೊಸ ಸಂಘಗಳಿಗೆ ಸ್ವಂತ ಗೋದಾಮು ನಿರ್ಮಿಸಿಕೊಳ್ಳಲು ರಿಯಾಯಿತಿ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡಲು ಕ್ರಮ ವಹಿಸಲಾಗಿದೆ ಎಂದು ಭರವಸೆ ನೀಡಿದರು.
2025-26 ನೇ ಸಾಲಿನಲ್ಲಿ ವಿವಿಧ ಯೋಜನೆಗಳ ಮೂಲಕ 370 ಕೋಟಿ ರೂಗಳ ಕೃಷಿಯೇತರ ಸಾಲವನ್ನು ನೀಡಲು ಗುರಿಹೊಂದಲಾಗಿದೆ. ಇದರಿಂದಾಗಿ ಪ್ರಸಕ್ತ ವರ್ಷ ಬ್ಯಾಂಕಿನ ವಾರ್ಷಿಕ ವಹಿವಾಟು 2200 ಕೋಟಿ ರೂ ಮೀರುವ ಅಂದಾಜಿಸಲಾಗಿದೆ ಎಂದು ಹೇಳಿದರು.
ಡಿಸಿಸಿ ಬ್ಯಾಂಕ್ ತನ್ನದೇ ಆದ ಸುಸಜ್ಜಿತ ಕಟ್ಟಡದಲ್ಲಿ ಬ್ಯಾಂಕಿನ ವಹಿವಾಟು ನಡೆಸುತ್ತಿದೆ. ಗ್ರಾಹಕರಿಗೆ ಬ್ಯಾಂಕಿನಿಂದ ಸಿಗುವ ಸೌಲಭ್ಯಗಳ ಕುರಿತು ಅರಿವು ಮೂಡಿಸಲು ಎಲ್ಲಾ ಶಾಖೆಗಳಲ್ಲೂ ದೂರದರ್ಶನ ಅಳವಡಿಸಿ ಗ್ರಾಹಕರನ್ನು ಜಾಗೃತಗೊಳಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಕೆಸಿಸಿ ಸಾಲಗಾರರನ್ನು 5 ಲಕ್ಷಗಳಿಗೆ ಮಿತಿಗೊಳಿಸಿ ಅಪಘಾತ ವಿಮಾ ಸೌಲಭ್ಯ ಒದಗಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದರು.
ಪ್ರಸಕ್ತ ವರ್ಷದ ಮಾ.31 ಕ್ಕೆ 65.10 ಕೋಟಿ ಷೇರು ಬಂಡವಾಳವನ್ನು ಸಂಗ್ರಹಿಸಲಾಗಿದ್ದು, ಈ ನಿಟ್ಟಿನಲ್ಲಿ ಡಿಸಿಸಿ ಬ್ಯಾಂಕ್ ಅಭಿವೃದ್ಧಿ ಪಥದಲ್ಲಿ ಸಾಗಲು ಕಾರಣರಾದ ಮತ್ತು ಸಂಪೂರ್ಣ ಸಹಕಾರ ನೀಡಿದ ಜಿಲ್ಲೆಯ ಎಲ್ಲಾ ಸಹಕಾರ ಸಂಘಗಳ ಸದಸ್ಯರಿಗೆ, ಆಡಳಿತ ಮಂಡಳಿ ಸದಸ್ಯರಿಗೆ ಎಲ್ಲಾ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಉಪಾಧ್ಯಕ್ಷರುಗಳಿಗೆ, ಕಾರ್ಯನಿರ್ವಹಣಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿ ಪ್ರಕಾಶ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಹೆಚ್.ಬಿ ಸತೀಶ್, ನಿರ್ದೇಶಕರುಗಳಾದ ಕೆ.ಆರ್. ಆನಂದಪ್ಪ, ಟಿ.ಎಲ್. ರಮೇಶ್, ಡಿ.ಸಿ ಶಂಕ್ರಪ್ಪ, ಹೆಚ್.ಬಿ ಶಿವಣ್ಣ, ಎಸ್.ಜಿ ರಾಮಪ್ಪ, ಹೆಚ್.ವಿ. ಸಂದೀಪ್ ಕುಮಾರ್, ಎಸ್.ಎನ್ ರಾಮಸ್ವಾಮಿ, ಎಂ.ಎಸ್ ನಿರಂಜನ್, ಎಂ. ಪರಮೇಶ್ವರಪ್ಪ, ಸಹಕಾರ ಸಂಘಗಳ ಉಪ ನಿಬಂಧಕರಾದ ಡಿ.ಎಸ್. ತೇಜಸ್ವಿನಿ, ಅಪೆಕ್ಸ್ ಬ್ಯಾಂಕ್ ನಾಮಿನಿ ಸದಸ್ಯ ಎಲ್.ಜಗದೀಶ್ ಹಾಗೂ ಸಹಕಾರ ಸಂಘಗಳ ಜಂಟಿ ನಿಬಂಧಕರಾದ ಪ್ರವೀಣ್ ಬಿ ನಾಯಕ್ ಉಪಸ್ಥಿತರಿದ್ದರು.



