SL-Bhyrappa_copy_1078x607

 

 

ಸರಸ್ವತಿ ಸಮ್ಮಾನ್‌ ಪುರಸ್ಕೃತ ಕನ್ನಡದ ಹೆಸರಾಂತ ಸಾಹಿತಿ ಎಸ್‌ಎಲ್‌ ಭೈರಪ್ಪ ವಿಧಿವಶರಾಗಿದ್ದಾರೆ. ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಭೈರಪ್ಪನವರು (94) ಹೃದಯಸ್ತಂಭನದಿಂದ ಇಂದು ಬುಧವಾರ ಮಧ್ಯಾಹ್ನ 2:38ಕ್ಕೆ ನಿಧನರಾದರು.

ಕೆಲ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಎಸ್.ಎಲ್ ಭೈರಪ್ಪನವರು ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಕನ್ನಡ ಭಾಷೆಯಲ್ಲಿ ಹಲವು ಹೆಸರಾಂತ ಕೃತಿಗಳನ್ನು ಬರೆದಿರುವ ಇವರ ಅನೇಕ ಕೃತಿಗಳು ಇಂಗ್ಲಿಷ್‌ ಹಾಗೂ ಭಾರತೀಯ ಭಾಷೆಗಳಿಗೆ ಅನುವಾದಗೊಂಡು ಭಾರತದ ಸಾಹಿತ್ಯವಲಯದಲ್ಲಿ ಹೆಸರು ಪಡೆದಿದೆ. ಇವರ ಕಾದಂಬರಿಗಳು ಹಲವಾರು ಮರುಮುದ್ರಣಗಳನ್ನು ಕಂಡಿವೆ. ಇವರಿಗೆ ಭಾರತ ಸರ್ಕಾರವು 2023ನೇ ಸಾಲಿನಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ.

ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಸಂತೇಶಿವರದಲ್ಲಿ ಆಗಸ್ಟ್‌ 20, 1931 ರಂದು ಜನಿಸಿದ ಭೈರಪ್ಪನವರು ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲೇ ಪಡೆದರು.

ಪ್ರೌಢ ಶಿಕ್ಷಣ ಹಾಗೂ ಕಾಲೇಜು ಓದು ಮೈಸೂರಿನಲ್ಲಿ ಮುಂದುವರೆಸಿದ ಭೈರಪ್ಪನವರು ಎಂ.ಎ.ನಲ್ಲಿ ಸುವರ್ಣ ಪದಕದೊಂದಿಗೆ ತೇರ್ಗಡೆಯಾದರು. ಬರೋಡಾದ ಮಹಾರಾಜ ಸಯ್ಯಾಜಿರಾವ್ ವಿಶ್ವವಿದ್ಯಾಲಯದಿಂದ “ಸತ್ಯ ಮತ್ತು ಸೌಂದರ್ಯ” ಎಂಬ ಇಂಗ್ಲಿಷ್‌ನಲ್ಲಿ ರಚಿಸಿದ ಮಹಾ ಪ್ರಬಂಧಕ್ಕಾಗಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ.

ಆಯಾ ಕಾಲದಲ್ಲಿ ಬಂದ ಅವರ ಕಾದಂಬರಿಗಳೆಲ್ಲಾ ಚರ್ಚೆಗೆ ಒಳಗಾಗಿವೆ. ಇಂಗ್ಲಿಷ್ ಭಾಷೆಯೂ ಸೇರಿದಂತೆ ಭಾರತೀಯ ಹಲವು ಭಾಷೆಗಳಿಗೆ ಭೈರಪ್ಪನವರ ಕಾದಂಬರಿಗಳು ಅನುವಾದಗೊಂಡಿವೆ. ಗೃಹಭಂಗ, ವಂಶವೃಕ್ಷ, ನೆಲೆ, ಸಾಕ್ಷಿ, ನಾಯಿ ನೆರಳು, ತಬ್ಬಲಿಯು ನೀನಾದೆ ಮಗನೆ, ದಾಟು, ಧರ್ಮಶ್ರೀ, ಪರ್ವ, ಭಿತ್ತಿ ಮುಂತಾದವು ಹಿಂದಿ, ಮರಾಠಿಯಲ್ಲಿ ಜನಪ್ರಿಯವಾಗಿವೆ.

ಭೈರಪ್ಪನವರು ಭಾರತೀಯ ಮತ್ತು ಪಾಶ್ಚಾತ್ಯ ಸಂಗೀತಾಸಕ್ತರಾಗಿರುವುದರೊಂದಿಗೆ ಚಿತ್ರ ಮತ್ತು ಶಿಲ್ಪಕಲೆಯಲ್ಲೂ ಅಭಿರುಚಿ ಹೊಂದಿದ್ದರು . ಬಾಲ್ಯದಿಂದಲೇ ಪ್ರವಾಸದ ಗೀಳು ಹತ್ತಿಸಿಕೊಂಡಿದ್ದ ಇವರು, ಉತ್ತರ ಮತ್ತು ದಕ್ಷಿಣ ದೃವಗಳೂ ಒಳಗೊಂಡಂತೆ ವಿಶ್ವದ ಏಳೂ ಭೂಖಂಡಗಳಲ್ಲಿ ಪ್ರವಾಸ ಮಾಡಿದ್ದಾರೆ.

ಕರ್ನಾಟಕ ಆದಿಯಾಗಿ ಭಾರತ ಮತ್ತು ವಿದೇಶಗಳಲ್ಲೂ ಅವರ ಕಾದಂಬರಿಗಳ ಕುರಿತಾದ ವಿಚಾರಗೋಷ್ಠಿಗಳು ನಡೆದು, ಅವರ ಕಾದಂಬರಿಗಳ ಅಧ್ಯಯನ ಗ್ರಂಥ ಸಂಪುಟಗಳು ಹೊರಬಂದಿವೆ. ಭೈರಪ್ಪನವರ ಕಾದಂಬರಿಗಳು ಕರ್ನಾಟಕದ ಹಲವು ವಿಶ್ವವಿದ್ಯಾಲಯಗಳ ಪಾಠ್ಯಗಳಾಗಿ ಸ್ಥಾನವನ್ನು ಪಡೆದಿರುವುದಲ್ಲೆದೆ, 20ಕ್ಕೂ ಹೆಚ್ಚು ಸಂಶೋಧನಾ ವಿದ್ಯಾರ್ಥಿಗಳ ಅಧ್ಯಯನದ ವಿಷಯವೂ ಆಗಿವೆ.

ಭೈರಪ್ಪನವರ 24 ಕಾದಂಬರಿಗಳನ್ನೂ ಹಾಗೂ ಸಾಹಿತ್ಯವಿಮರ್ಶೆ, ಸೌಂದರ್ಯಮೀಮಾಂಸೆ ಮತ್ತು ಸಂಸ್ಕೃತಿಯ ಕುರಿತಾಗಿ 5 ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಅವರ ಬಹುತೇಕ ಕಾದಂಬರಿಗಳು ಭಾರತದ ಹದಿನಾಲ್ಕು ಭಾಷೆಗಳಿಗೂ ಅನುವಾದಗೊಂಡು, ಆರು ಕಾದಂಬರಿಗಳು ಇಂಗ್ಲೀಷಿಗೆ ಅನುವಾದಗೊಂಡಿವೆ. ಅವರು ಮೂರು ದಶಕಳಿಗೂ ಹೆಚ್ಚು ಕಾಲ ಎನ್.ಸಿ.ಈ.ಆರ್.ಟಿ ಯಲ್ಲಿ ತತ್ತ್ವಶಾಸ್ತ್ರದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ