ಆಲ್ದೂರುಹೋಬಳಿ ಗಾಳಿಗಂಡಿ ಗ್ರಾಮದ ನೂರಾರು ಮಂದಿ ನಿವೇಶನ ರಹಿತರು ಬುಧವಾರ ಮುಂಜಾನೆ ನಿವೇಶನ ಬೇಡಿಕೆ ಇಟ್ಟು, ಗುಡಿಸಲು ಹಾಕಿ ಪ್ರತಿಭಟನೆ ನಡೆಸಿದರು.
ಚಿಕ್ಕ ಮಾಗರವಳ್ಳಿ ಸರ್ವೆ ನಂಬರ್ 172 ಜಾಗದಲ್ಲಿ ನಿವೇಶನ ರಹಿತರು ನಿವೇಶನಕ್ಕಾಗಿ ಗುಡಿಸಲುಗಳನ್ನು ಹಾಕಲು ಪ್ರಾರಂಭಿಸಿದ್ದು, ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ
ಅರಣ್ಯ ಇಲಾಖೆ ಸಿಬ್ಬಂದಿಗಳು ಅಧಿಕಾರಿಗಳು ನಡುವೆ ವಾಗ್ವಾದ ಉಂಟಾಯಿತು.
ಬಳಿಕ ಸ್ಥಳಕ್ಕೆ ಆಗಮಿಸಿದ ವಲಯ ಅರಣ್ಯ ಅಧಿಕಾರಿ ಹರೀಶ್, ಸರ್ವೆ ನಂಬರ್ 172 ಜಾಗ 80 ಎಕರೆ ಡೀಮ್ಡ್ ಅರಣ್ಯ ವ್ಯಾಪ್ತಿಗೆ ಸೇರಿದ್ದು, ಪಹಣಿಯನ್ನು ಕೂಡ ಅರಣ್ಯ ನೆಡುತೋಪು ಎಂದು ಉಲ್ಲೇಖವಾಗಿದೆ ಇಲಾಖೆಗೆ ಸಂಬಂಧಿಸಿದ ಜಾಗವಾದ್ದರಿಂದ ಗುಡಿಸಲುಗಳನ್ನು ತೆರವುಗೊಳಿಸಬೇಕೆಂದು ನಿವೇಶನ ರಹಿತ ಪ್ರತಿಭಟನ ನಿರತರಿಗೆ ಸೂಚಿಸಿದರು.
ನಿವೇಶನ ರಹಿತರ ಸಮಿತಿಯ ಕೃಷ್ಣಪ್ಪ, ಶೇಖರ್, ಹಲವಾರು ಎಕರೆಗಟ್ಟಲೆ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿರುವ ಭೂ ಮಾಲೀಕರನ್ನು ಇಲಾಖೆಯವರು ಪ್ರಶ್ನಿಸುವುದಿಲ್ಲ ಬದಲಾಗಿ ಹಲವು ವರ್ಷಗಳಿಂದ ಬಾಡಿಗೆ ಮನೆಗಳಲ್ಲಿ ವಾಸವಿದ್ದು, ನಿವೇಶನವಿಲ್ಲದೆ ಕಷ್ಟಪಡುವ ಕೂಲಿ ಕಾರ್ಮಿಕರು ಜೀವನಕ್ಕಾಗಿ ಸೂರು ನಿರ್ಮಿಸಲು ಮುಂದಾದರೆ ಅಕ್ರಮ ವೆಂದು ತಡೆಯುತ್ತೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಕ್ರಿಯೆ ನೀಡಿದ ವಲಯ ಅರಣ್ಯ ಅಧಿಕಾರಿ ಹರೀಶ್ ಸುಪ್ರೀಂ ಕೋರ್ಟ್ ನಿಯಮಾವಳಿ ತಿಳಿಸುವಂತೆ ಡಿಮ್ಡ್ ಅರಣ್ಯ ವ್ಯಾಪ್ತಿಗೆ ಬರುವಂತಹ ಇಲಾಖೆಯ ಜಮೀನನ್ನು ಯಾವುದೇ ಕಾರಣಕ್ಕೂ ಉಪಯೋಗಿಸಲು ಅವಕಾಶವಿಲ್ಲ ಆ ರೀತಿ ಮಾಡಿದರೆ ಅಪರಾಧವಾಗುತ್ತದೆ ಈಗಾಗಲೇ ಎಷ್ಟೋ ಮಂದಿ ಒತ್ತುವರಿ ಮಾಡಿಕೊಂಡಿರುವ ಭೂಮಾಲೀಕರ ಕಾಫಿ ತೋಟಗಳನ್ನು ತೆರವುಗೊಳಿಸಿರುವ ಉದಾಹರಣೆಗಳನ್ನು ತಿಳಿಸಿ ಗುಡಿಸಲುಗಳನ್ನು ತೆರೆವುಗೊಳಿಸದಿದ್ದರೆ ಪ್ರಕರಣ ದಾಖಲಿಸಲಾಗುತ್ತದೆ ಆದ್ದರಿಂದ ಕೂಡಲೇ ತೆರಗುಗೊಳಿಸುವಂತೆ ಮನವಿ ಮಾಡಿದ ನಂತರ ಗುಡಿಸಲು ಹಾಕಿದ್ದ ನಿವೇಶನ ರಹಿತರು ಗುಡಿಸಲು ತೆರವುಗೊಳಿಸಿ ತೆರಳಿದರು.
ಉಪ ವಲಯ ಅರಣ್ಯ ಅಧಿಕಾರಿಗಳಾದ ಸಂದೀಪ್, ಚಿದಾನಂದ, ಪೊಲೀಸ್ ಇಲಾಖೆಯ ಪಿಎಸ್ಐ ಗಳಾದ ಮೂರ್ತಪ್ಪ, ರವಿ ಜಿಎ, ಸಿಬ್ಬಂದಿಗಳು ಇದ್ದರು.



