mescom 2_page-0001

 

 

ಹೇಮಾವತಿ ನದಿಯಲ್ಲಿ ಜೋತುಬಿದ್ದಿದ್ದ ತಂತಿಯಿಂದ ವಿದ್ಯುತ್ ತಗುಲಿ ವ್ಯಕ್ತಿಯೊಬ್ಬರು ಸ್ಥಳದಲ್ಲೆ ದಾರುಣವಾಗಿ ಮೃತಪಟ್ಟ ಘಟನೆ ದಾರದಹಳ್ಳಿ ಗ್ರಾಮದ ಹೇಮಾವತಿ ನದಿಯಲ್ಲಿ ಶುಕ್ರವಾರ ನಡೆದಿದೆ

ಶುಕ್ರವಾರ ಬೆಳಿಗ್ಗೆ 11ಕ್ಕೆ ಜೋಗಣ್ಣಕೆರೆ ಗ್ರಾಮದ ಸಚಿನ್ ನಗರದ ನಿವಾಸಿ ಮೆಸ್ಕಾಂನಲ್ಲಿ ಹಿಂದೆ ಹೊರಗುತ್ತಿಗೆ ನೌಕರನಾಗಿದ್ದ ಸಂತೋಷ್ (34) ಎಂಬುವರು ಪತ್ನಿಯೊಂದಿಗೆ ಹೇಮಾವತಿ ನದಿಗೆ ತೆರಳಿದ್ದಾರೆ. ಅವರ ಪತ್ನಿ ಬಟ್ಟೆ ತೊಳೆಯುತ್ತಿದ್ದಾಗ, ನದಿಯಲ್ಲಿ ಮೀನು ಹಿಡಿಯುತ್ತಿದ್ದ ಸಂತೋಷ್ ಅವರ ಮೇಲೆ ನದಿಯ ನೀರಿನಲ್ಲಿ ತೇಲುತ್ತಿದ್ದ ತಂತಿಯಿಂದ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೆ ಮೃತಪಟ್ಟಿದ್ದಾರೆ.

ವಿಷಯ ತಿಳಿದ ಕೂಡಲೆ ಸ್ಥಳದಲ್ಲಿ ನೂರಾರು ಮಂದಿ ಜಮಾಯಿಸಿ ಮೆಸ್ಕಾಂ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿ ಮೃತ ವ್ಯಕ್ತಿಯ ಕುಟುಂಬಕ್ಕೆ ಸ್ಥಳದಲ್ಲೆ 10 ಲಕ್ಷ ರೂ. ಪರಿಹಾರ ನೀಡಬೇಕು. ಅಲ್ಲಿವರೆಗೂ ಮೃತ ದೇಹವನ್ನು ತೆರವುಗೊಳಿಸುವುದಿಲ್ಲ ಎಂದು ಪಟ್ಟು ಹಿಡಿದು ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಭೇಟಿ ನೀಡಿದ ಮೆಸ್ಕಾಂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾಕಾರರನ್ನು ಪೊಲೀಸರು ಸಮಾಧಾನಪಡಿಸಲು ಯತ್ನಿಸಿ ವಿಫಲರಾದರು. ಸಂಜೆ 6.30ರವರೆಗೂ ಮೃತ ದೇಹದ ಬಳಿ ಪ್ರತಿಭಟನೆ ಮುಂದುವರೆಯಿತು. ನಂತರ ಪೊಲೀಸರ ಮಧ್ಯಸ್ಥಿಕೆಯಲ್ಲಿ ಮೆಸ್ಕಾಂ ಅಧಿಕಾರಿಗಳ ಬಳಿ ಮಾತುಕತೆ ನಡೆದು 7.50 ಲಕ್ಷ ರೂ. ಪರಿಹಾರ ನೀಡುವುದಾಗಿ ಮೆಸ್ಕಾಂ ಅಧಿಕಾರಿಗಳು ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಕೈಬಿಡಲಾಯಿತು. ನಂತರ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತಾಲೂಕು ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು.

ಮೃತ ಸಂತೋಷ್ ಅವರಿಗೆ ಪತ್ನಿ, ಒಂದು ಗಂಡು ಮತ್ತು ಒಂದು ಹೆಣ್ಣು  ಮಕ್ಕಳಿದ್ದಾರೆ. ಇವರು ಮಾನ್ಸೂನ್ ಸಮಯದಲ್ಲಿ ಮೆಸ್ಕಾಂನಲ್ಲಿ ಹೊರಗುತ್ತಿಗೆ ನೌಕರರಾಗಿ ಕಾರ್ಯನಿರ್ವಹಿಸುತ್ತಿದ್ದರು ಎನ್ನಲಾಗಿದೆ.

ಸಿಪಿಐ ಕೆ.ವಿ.ರಾಜಶೇಖರ್, ಮೂಡಿಗೆರೆ ಪಿಎಸ್ಐ ಹರ್ಷವರ್ಧನ್, ಗೋಣಿಬೀಡು ಪಿಎಸ್ಐ ಶ್ರೀನಾಥ್ ರೆಡ್ಡಿ ಬಂದೋಬಸ್ತ್ ಏರ್ಪಡಿಸಿದ್ದರು. ಮೆಸ್ಕಾಂ ಅಧಿಕಾರಿಗಳಾದ ಜಿತೇಂದ್ರ ಕುಮಾರ್, ರವಿ ಕುಮಾರ್, ಷಣ್ಮುಖ ಸ್ಥಳದಲ್ಲಿದ್ದರು. ಮೃತ ವ್ಯಕ್ತಿಯ ಪತ್ನಿ ಶಿಲ್ಪ ನೀಡಿದ ದೂರಿನಂತೆ ಮೂಡಿಗೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೆಸ್ಕಾಂ ನವರ ನಿರ್ಲಕ್ಷದಿಂದ ಕಾಡಿನೊಳಗೆ ಹಾದು ಹೋಗಿರುವ ವಿದ್ಯುತ್ ತಂತಿ ಕಂಬದಲ್ಲಿ ಸಡಿಲಗೊಂಡು ಕಳೆದ 6 ತಿಂಗಳಿನಿಂದ ಹೇಮಾವತಿ ನದಿಯ ನೀರಿಗೆ ತಾಗಿ ಜೋತು ಬಿದ್ದಿತ್ತು. ಈ ವರೆಗೂ ಅಲ್ಲಿಗೆ ಮೆಸ್ಕಾಂ ಸಿಬ್ಬಂದಿಗಳು ಭೇಟಿ ನೀಡಿ ಸರಿಪಡಿಸಿಲ್ಲ. ವಿದ್ಯುತ್ ತಂತಿ ಜೋತು ಬಿದ್ದ ಸ್ಥಳ ನಿರ್ಜನ ಪ್ರದೇಶವಾಗಿದ್ದರಿಂದ ಯಾರೊಬ್ಬರೂ ಅಲ್ಲಿಗೆ ಹೋಗದಿರುವ ಕಾರಣ ಈ ವರೆಗೂ ಅನಾಹುತ ನಡೆದಿರಲಿಲ್ಲ. ಸಂತೋಷ್ ಎಂಬುವವರು ಮೀನು ಹಿಡಿಯಲು ಹೋಗಿದ್ದರಿಂದ ಬಲಿಯಾಗಬೇಕಾಯಿತು. ತಾಲೂಕಿನಾದ್ಯಂತ ವಿದ್ಯುತ್ ತಂತಿ ಕಾಫಿ ತೋಟದಲ್ಲಿ ಮತ್ತು ಶಾಲೆಗಳ ಚಾವಣಿ ಮೇಲ್ಭಾಗದಲ್ಲಿ ಹಾದುಹೋಗಿದೆ ಅದನ್ನು ತೆರವುಗೊಳಿಸುವಂತೆ ಮೆಸ್ಕಾಂ ಅಧಿಕಾರಿಗಳಿಗೆ ತಿಳಿಸಿದರೆ ಪ್ರಯೋಜನವಾಗಿಲ್ಲ. ಇನ್ನಾದರೂ ಎಚ್ಚೆತ್ತುಕೊಂಡು ಅಧಿಕಾರಿಗಳು ಸರಿಪಡಿಸಲಿ ಎಂದು ಸ್ಥಳೀಯರು ಆಗ್ರಹಸಿದ್ದಾರೆ.

ತಾಲೂಕಿನಾದ್ಯಂತ 11 ಕೆ ವಿ ವಿದ್ಯುತ್ ಲೈನ್ 96 ಕಿ.ಮೀ, ಸಾಮಾನ್ಯ ಲೈನ್ 250 ಕಿ.ಮೀ ಹಾದುಹೋಗಿದೆ. ಶೇ. 30 ಸಿಬ್ಬಂದಿಗಳು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇನ್ನೂ ಶೇ. 70 ಸಿಬ್ಬಂದಿ ಕೊರತೆಯಿದೆ. ಮಳೆಗಾಲದಲ್ಲಿ ಮಾನ್ಸೂನ್ ಗ್ಯಾಂಗ್ ಮ್ಯಾನ್ ಗಳನ್ನು ನೇಮಿಸಿಕೊಳ್ಳಲು ಅವಕಾಶವಿದೆ. ಬೇಸಿಗೆಯಲ್ಲಿ ಇರುವ ಸಿಬ್ಬಂದಿಗಳನ್ನು ಬಳಸಿ ನಿರ್ವಹಣೆ ಮಾಡಬೇಕಾಗಿದೆ. ದಾರದಹಳ್ಳಿ ಗ್ರಾಮದಲ್ಲಿ ಕಂಬದಲ್ಲಿ ತಂತಿ ಸಡಿಲಗೊಂಡು ಹೇಮಾವತಿ ನದಿಯೊಳಗೆ ಜೋತು ಬಿದ್ದ ಕಾರಣ ಅಲ್ಲಿಗೆ ತೆರಳಿದ್ದ ವ್ಯಕ್ತಿ ಮೃತಪಟ್ಟಿದ್ದಾರೆ. ಇಲಾಖೆಯ ನಿಯಮಾನುಸಾರ ಮೃತ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ನೀಡಲಾಗುವುದು 

  • ಜಿತೇಂದ್ರ ಕುಮಾರ್, ಮೆಸ್ಕಾಂ ಎಇಇ.

 

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ