February 10, 2026

 

 

ರಾಷ್ಟ್ರಕವಿ ಕುವೆಂಪು ಅವರ ವೈಜ್ಞಾನಿಕ, ವೈಚಾರಿಕ ವಿಚಾರಗಳು ಸರ್ವ ಕಾಲಕ್ಕೂ ಪ್ರಸ್ತುತವಾಗಿದ್ದು, ಈ ಬಗ್ಗೆ ಚಿಂತನ ಮಂಥನ ಅಗತ್ಯ ಎಂದು ಆದಿಚುಂಚನಗಿರಿ ಮಹಾಸಂಸ್ಥಾನದ ಕಾರ್ಯದರ್ಶಿಗಳಾದ ಶ್ರೀಶ್ರೀ ಗುಣನಾಥ ಸ್ವಾಮೀಜಿ ಹೇಳಿದರು.

ಅವರು ಚಿಕ್ಕಮಗಳೂರು ಕುವೆಂಪು ಕಲಾಮಂದಿರದಲ್ಲಿ ಬಿಜಿಎಸ್ ನೃತ್ಯನಾಟಕ ಸಂಗೀತ ವಿದ್ಯಾಲಯ ಶೃಂಗೇರಿ, ಶ್ರೀ ದೇವೀರಮ್ಮ ದೇವಾಲಯ ವ್ಯವಸ್ಥಾಪನ ಸಮಿತಿ ಬಿಂಡಿಗ, ಸುಗಮಸಂಗೀತ ಗಂಗಾ, ಜಿಲ್ಲಾ ಒಕ್ಕಲಿಗರ ಸಂಘ, ಕಲಾ ಸೇವಾ ಸಂಘ, ಕಲ್ಕಟ್ಟೆ ಪುಸ್ತಕದ ಮನೆ, ಲಯನ್ಸ್ ಸಂಸ್ಥೆ, ಆಶ್ರಯ ಫೌಂಡೇಶನ್ ಇವರುಗಳು ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಕುವೆಂಪು ಕಾವ್ಯ ನೃತ್ಯೋತ್ಸವ ವಿದುಶಿ ಡಾ. ಮಾನಸ ಮಂಡ್ಯ ಸಾರಥ್ಯದಲ್ಲಿ ‘ಕಾಡಿನ ಕೊಳಲು’ ನೃತ್ಯೋತ್ಸವದ ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ರಾಷ್ಟ್ರಕವಿ ಕುವೆಂಪು ಮತ್ತು ಸರ್ ಎಂ.ವಿಶ್ವೇಶ್ವರಯ್ಯ ಮಂಡ್ಯ ಹಾಗೂ ಮೈಸೂರಿನ ಜನತೆಗೆ ಅಚ್ಚುಮೆಚ್ಚಾಗಿದ್ದು, ಇವರ ವಿಚಾರಧಾರೆಗಳು ಚಿಂತನ ಮಂಥನ ಮಾಡುವುದು ಬಹಳ ವಿಶೇಷವಾಗಿದ್ದು, ಈ ದೃಷ್ಟಿಯಿಂದ ಇಲ್ಲಿ ಆಯೋಜಿಸಿರುವ ಕಾಡಿನ ಕೊಳಲು ನೃತ್ಯರೂಪಕ ಅರ್ಥಪೂರ್ಣವಾಗಿದೆ ಎಂದರು.

ಪ್ರಜ್ಞಾಪೂರಕವಾಗಿ ಚಿಂತನಾ ಮಂಥನ ಮಾಡುವ ಶಕ್ತಿಯನ್ನು ಮನುಷ್ಯನಿಗೆ ದೇವರು ನೀಡಿದ ಕೊಡುಗೆ ವಿಶೇಷವಾದ ಗುಣವಾಗಿದೆ. ಈ ನಿಟ್ಟಿನಲ್ಲಿ ಪ್ರಜ್ಞೆ ಬಹಳ ಮುಖ್ಯ ಎಂದು ಹೇಳಿದರು.

ಮಲೆನಾಡಿಗರಾದ ನಾವು ಕೊಳಲು ಧ್ವನಿ ಕೇಳಿಸಿಕೊಳ್ಳದೆ ಕಾಫಿ, ಅಡಿಕೆ, ಮೆಣಸು, ಏಲಕ್ಕೆ ಮುಂತಾದ ಬೆಳೆಗಳ ಬಗ್ಗೆ ತಲ್ಲೀನರಾಗಿದ್ದೇವೆ. ಆದರೆ, ಕುವೆಂಪು ಕಾಡಿನ ಮಹತ್ವವನ್ನು ಮೈಸೂರಿನಲ್ಲಿ ವರ್ಣಿಸಿರುವುದು ಹೆಮ್ಮೆ ತರುವ ವಿಚಾರ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇದಕ್ಕೆ ಪೂರಕವಾಗಿ ಜೀವ ತುಂಬುವ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆಂದು ಶ್ಲಾಘಿಸಿದ ಅವರು, ಚಿಕ್ಕಮಗಳೂರಿನ ಚಿಕ್ಕಮಲ್ಲಿಗೆ ಮೈಸೂರಿನಲ್ಲಿ ಅರಳಿ, ಮಂಡ್ಯದ ಬೆಲ್ಲವಾಗಿ ಮೈಸೂರು ಮಲ್ಲಿಗೆಯಾಗಿ ಚಿಂತಿಸಿದ ಕುವೆಂಪು ಅವರ ರಾಮಾಯಣ ದರ್ಶನಂ ಕೃತಿಯನ್ನು ಡಾ. ಪುರುಷೋತ್ತಮ ಎಂಬುವವರು ಸಂಸ್ಕøತಕ್ಕೆ ತರ್ಜುಮೆ ಮಾಡಿದ್ದಾರೆಂದು ಹೇಳಿದರು.

ಭಾರತದ ಸನಾತನ ಸಂಸ್ಕøತಿಯಲ್ಲಿ ಗುರುವಿಗೆ ಮಹತ್ವದ ಸ್ಥಾನವಿದ್ದು, ಗುರುಹಿರಿಯರ ಮಾರ್ಗದರ್ಶನದಲ್ಲಿ ಯುವಜನಾಂಗ ನಡೆಯುವುದು ಅಗತ್ಯವಾಗಿದೆ ಎಂದು ಕರೆನೀಡಿದರು.

ಅಧ್ಯಕ್ಷತೆ ವಹಿಸಿದ್ದ ಸುಗಮಸಂಗೀತ ಗಂಗಾ ಅಧ್ಯಕ್ಷ ಡಾ. ಜೆ.ಪಿ ಕೃಷ್ಣೇಗೌಡ ಮಾತನಾಡಿ, ಕನ್ನಡಕ್ಕಾಗಿ ಕೈಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ, ಕನ್ನಡವೇ ಸತ್ಯ ಕನ್ನಡವೇ ನಿತ್ಯ ಮುಂತಾದ ಕನ್ನಡದ ಅಭಿಮಾನದ ಘೋಷಣೆಗಳನ್ನು ತಿಳಿಸಿದ ಅವರು, ಕನ್ನಡಕ್ಕೆ ಭಾರತ ರತ್ನ ನೀಡಬೇಕೆಂದು ಆಗ್ರಹಿಸಿ ಶೀಘ್ರದಲ್ಲೇ ಕೇಂದ್ರಸರ್ಕಾರಕ್ಕೆ ನಿಯೋಗ ಹೋಗಲು ನಿರ್ಧರಿಸಲಾಗಿದೆ ಎಂದರು.

ಮಂಡ್ಯದ ಕರ್ನಾಟಕ ಸಂಘದ ಅಧ್ಯಕ್ಷ ಬಿ.ಜಯಪ್ರಕಾಶ್ ಗೌಡ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸಾಹಿತ್ಯವನ್ನು ಬರೀ ಪಠಣ ಮಾಡಿದರೆ ಸಾಲದು. ಮನನ ಮಾಡಿಕೊಂಡು ಮನಸ್ಸಿನ ಒಳಗೆ ತೆಗೆದುಕೊಳ್ಳಬೇಕಾಗಿದೆ ಎಂದು ತಿಳಿಸಿದರು.

ಕುವೆಂಪು ಅವರು ರಚಿಸಿರುವ ಗೀತೆ ಕಚ್ಚಾಡುವವರನ್ನು ಕೂಡಿಸಿ ಒಲಿಸು ಹೊಟ್ಟೆಯ ಕಿಚ್ಚಿಗೆ ಕಣ್ಣೀರು ಸುರಿಸು ಸತ್ತಂತಿಹರನ್ನು ಬಡಿದೆಚ್ಚರಿಸು ಎಂಬುದನ್ನು ಪ್ರಸ್ತುತ ಸಮಾಜ ಮನನ ಮಾಡಿದಾಗ ಮಾತ್ರ ಸರ್ವಜನಾಂಗದ ಶಾಂತಿಯ ತೋಟವಾಗುತ್ತದೆ ಎಂದರು.

ಮನುಷ್ಯನ ಸರ್ವಾಂಗೀಣ ಪ್ರಗತಿಗೆ ಶಿಕ್ಷಣ ಪ್ರಮುಖ ಸಾಧನವಾಗಿದ್ದು, ಅಂತರಂಗದ ಶುದ್ಧಿಗೆ ಸಾಹಿತ್ಯ, ಸಂಗೀತ, ನೃತ್ಯ, ಚಿತ್ರಕಲೆ ಮೂಲಕ ಜಾಗೃತಿ ಮೂಡಿಸುವ ಇವುಗಳು ಮನುಷ್ಯನ ಅಭಿವ್ಯಕ್ತಿ ಪ್ರಕಾರಗಳಾಗಿವೆ ಎಂದು ಹೇಳಿದರು.

ವೃತ್ತಿಜೀವನಕ್ಕಿಂತ ಪ್ರವೃತ್ತಿ ಜೀವನ ಬದುಕಿಗೆ ತಂಪನ್ನು ಎರೆಯುವ ರೀತಿ ಸಾಧನೆ ಮಾಡಬೇಕಿದೆ. ಇದಕ್ಕೆ ವಿದುಶಿ ಡಾ. ಮಾನಸ ಸ್ಪಷ್ಟ ಉದಾಹರಣೆಯಾಗಿದ್ದಾರೆ. ಬಾಲಗಂಗಾಧರನಾಥ ಶ್ರೀಗಳ ಆಶಯಗಳನ್ನು ಗುಣನಾಥ ಶ್ರೀಗಳು ಬಿತ್ತಿ ಬೆಳೆಯುತ್ತಿದ್ದಾರೆ. ಸಾಹಿತ್ಯದ ಬಗ್ಗೆ ಇವರು ಆಸಕ್ತಿವುಳ್ಳ ಸಹೃದಯಿಗಳಾಗಿದ್ದಾರೆಂದು ಬಣ್ಣಿಸಿದರು.

ಹೃದಯ ಸಂವಾದ ಕಳೆದುಕೊಂಡಿರುವ ಈ ಸಂದರ್ಭದಲ್ಲಿ ಮಕ್ಕಳಿಗೆ ಶಿಕ್ಷಣ ಕೊಡಿಸಿದರೆ ಸಾಲದು, ಆರೋಗ್ಯಪೂರ್ಣ ಸಮಾಜ ನಿರ್ಮಾಣ ಮಾಡುವ ಸಂಗೀತ ಸಾಹಿತ್ಯ ಅಂತರಂಗದ ಬೆಳವಣಿಗೆಗೆ ಪೂರಕ ವಾತಾವರಣ ಸೃಷ್ಟಿಸಬೇಕೆಂದು ಕರೆನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಟಿ.ಡಿ ಮಲ್ಲೇಶ್, ಕಲ್ಕಟ್ಟೆ ಪುಸ್ತಕದ ಮನೆ ಅಧ್ಯಕ್ಷೆ ರೇಖಾ ನಾಗರಾಜ್‍ರಾವ್, ಲಯನ್ಸ್ ಸಂಸ್ಥೆ ಅಧ್ಯಕ್ಷ ಸಿ.ಎನ್ ಕುಮಾರ್, ಆಶ್ರಯ ಫೌಂಡೇಶನ್ ಅಧ್ಯಕ್ಷೆ ಡಾ. ವರ್ಷಾ, ಪ್ರಾಂಶುಪಾಲರಾದ ಡಾ. ಸಿ.ಟಿ ಜಯದೇವ್, ಜಾನಪದ ಪರಿಷತ್ ಅಧ್ಯಕ್ಷ ಜಿ.ವಿ.ಸುರೇಶ್, ಕಲಾ ಸೇವಾ ಸಂಘದ ಅಧ್ಯಕ್ಷ ಡಿ.ಎನ್.ಮೋಹನ್, ನಟಿ ಸಂಗೀತಾ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಜಿ. ಶಂಕರ್ ಸ್ವಾಗತಿಸಿ, ನಾಗರಾಜ್ ರಾವ್ ಕಲ್ಕಟ್ಟೆ ವಂದಿಸಿದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ