ಕಾಫಿ ತೋಟಗಳ ಆನ್-ಲೈನ್ ಹರಾಜನ್ನು ತತ್ಕ್ಷಣವೇ ಸ್ಥಗಿತಗೊಳಿಸುವಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆದೇಶ ಮಾಡಿದ್ದಾರೆ ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಹಳಸೆ ಶಿವಣ್ಣ ತಿಳಿಸಿದ್ದಾರೆ.
ಈ ಬಗ್ಗೆ ಕೆಜಿಎಫ್ ಅಧ್ಯಕ್ಷ ಹಳಸೆ ಶಿವಣ್ಣ ಮತ್ತು ಪ್ರಧಾನ ಕಾರ್ಯದರ್ಶಿ ಟಿ.ಪಿ. ಸುರೇಂದ್ರ ಅವರು ಪತ್ರಿಕಾ ಹೇಳಿಕೆ ನೀಡಿದ್ದಾರೆ.
ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ನೇತೃತ್ವದಲ್ಲಿ ಸಂಸದರು ಮತ್ತು ಬೆಳೆಗಾರರ ಸಂಘಟನೆಗಳ ಪ್ರತಿನಿಧಿಗಳು ಗುರುವಾರ ಕೇಂದ್ರ ವಿತ್ತ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಮಾಡಿದ್ದು, ಈ ಸಂದರ್ಭದಲ್ಲಿ ಕಾಫಿ ಬೆಳೆಗಾರರಿಗೆ ಮಾರಕವಾಗಿರುವ ಸರ್ಫೇಸಿ ಕಾಯ್ದೆಯನ್ನು ರದ್ದುಗೊಳಿಸುವಂತೆ ಮನವಿ ಮಾಡಲಾಯಿತು. ಸರ್ಫೇಸಿ ಕಾಯ್ದೆಯ ಕರಾಳತೆಯ ಕುರಿತು ಮನಮುಟ್ಟುವಂತೆ ಕೇಂದ್ರ ಸಚಿವರಿಗೆ ವಿವರಿಸಲಾಯಿತು.
ಶೇ. 95 ಕ್ಕೂ ಹೆಚ್ಚು ಭಾಗ ಸಣ್ಣ-ಅತಿ ಸಣ್ಣ ಬೆಳೆಗಾರರನ್ನು ಹೊಂದಿರುವ ಕಾಫಿ ಕೃಷಿ ಕ್ಷೇತ್ರದ ಸಾಲಗಾರರಿಗೆ ಮಾರಕವಾಗಿ ಪರಿಣಮಿಸಿರುವ ಸರ್ಫಾಸಿ ಕಾಯ್ದೆಯ ದುಷ್ಪರಿಣಾಮ ಹಾಗೂ ಕೆಲವು ಬ್ಯಾಂಕರ್‍ಗಳು ಹಾಗೂ ಮಧ್ಯವರ್ತಿಗಳು ಈ ಕಾಯ್ದೆಯ ದುರುಪಯೋಗ ಮಾಡುತ್ತಿರುವ ಕುರಿತು ಸವಿವರವಾಗಿ ಮನದಟ್ಟು ಮಾಡಲಾಯಿತು.
ಈ ಬಗ್ಗೆ ಅತ್ಯಂತ ಸಹಾನುಭೂತಿ ಹಾಗೂ ಸಕಾರಾತ್ಮಕವಾಗಿ ಸ್ಪಂದಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ರವರು ತಾವು ಕಾಫಿ ಕೃಷಿ ಸಾಲದ ವಸೂಲಾತಿಗೆ ಸರ್ಫೇಸಿ ಕಾಯ್ದೆ ಬಳಕೆ ಬಗ್ಗೆ ವಿವರವಾಗಿ ಪರಿಶೀಲಿಸುವುದಾಗಿ ತಿಳಿಸಿರುತ್ತಾರೆ. ಅತ್ಯಂತ ಪ್ರಮುಖವಾಗಿ ಈ ಕೂಡಲೇ ಜಾರಿಗೆ ಬರುವಂತೆ ಸರ್ಫೇಸಿ ಕಾಯ್ದೆ ಅಡಿಯಲ್ಲಿ ಕಾಫಿತೋಟಗಳ ಇ-ಹರಾಜು (ಆನ್ ಲೈನ್ ಹರಾಜು) ಸ್ಥಗಿತಗೊಳಿಸುವಂತೆ ಬ್ಯಾಂಕ್ ಗಳಿಗೆ ಸೂಚಿಸಲು ಅಧಿಕಾರಿಗಳಿಗೆ ಆದೇಶ ನೀಡಿರುತ್ತಾರೆ.
ಸಚಿವರನ್ನು ಭೇಟಿಯಾದ ನಿಯೋಗದಲ್ಲಿ ಸಂಸದರಾದ ಕೋಟಾ ಶ್ರೀನಿವಾಸ ಪೂಜಾರಿ, ಡಾ. ಸಿ.ಎನ್. ಮಂಜುನಾಥ್. ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಮಲ್ಲೇಶ್ ಇದ್ದರು.
ಬೆಳೆಗಾರರ ಸಂಘಟನೆಗಳ ಮನವಿಗೆ ಸ್ಪಂದಿಸಿ ಕೇಂದ್ರ ಸಚಿವರನ್ನು ಭೇಟಿ ಮಾಡಿದ ಎಲ್ಲಾ ಮಹನೀಯರಿಗೆ ಮತ್ತು ಸಕಾರಾತ್ಮಕವಾಗಿ ಸ್ಪಂದಿಸಿದ ಕೇಂದ್ರ ಸಚಿವೆಯವರಿಗೆ ಕರ್ನಾಟಕ ಗ್ರೋಯರ್ಸ್ ಫೆಡರೇಶನ್ ತನ್ನೆಲ್ಲ ಸಹ ಸಂಘಟನೆಗಳ ಪರವಾಗಿ ಹಾಗೂ ಸಮಸ್ತ ಬೆಳೆಗಾರರ ಸಮುದಾಯದ ಪರವಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತದೆ ಎಂದಿದ್ದಾರೆ.

ಫೆಬ್ರವರಿ ತಿಂಗಳ 9,10 ಹಾಗೂ 11 ನೇ ದಿನಾಂಕದಂದು ಕೆಜಿಎಫ್ ಅಧ್ಯಕ್ಷರಾದ ಹಳಸೆ ಶಿವಣ್ಣನವರ ನೇತೃತ್ವದ ನಿಯೋಗ ನವದೆಹಲಿಯಲ್ಲಿ ಕೇಂದ್ರ ಸಚಿವರಾದ ಹೆಚ್ ಡಿ ಕುಮಾರಸ್ವಾಮಿ, ಭೂಪೇಂದ್ರ ಯಾದವ್, ಮಾಜಿ ಪ್ರಧಾನಿಗಳಾದ ಹೆಚ್ ಡಿ ದೇವೇಗೌಡರು. ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ಡಾ. ಸಿ.ಎನ್ ಮಂಜುನಾಥ್ ಹಾಗೂ ಹಲವು ಸಚಿವಾಲಯದ ಉನ್ನತ ಅಧಿಕಾರಿಗಳನ್ನು ಭೇಟಿ ಮಾಡಿ ಬೆಳೆಗಾರರ ಸಮಸ್ಯೆಗಳ ಬಗ್ಗೆ ಮನದಟ್ಟು ಮಾಡಿದ್ದರು.

ನಿಯೋಗದಲ್ಲಿ ಕೆಜಿಎಫ್ ಉಪಾಧ್ಯಕ್ಷರಾದ ಕೆ ಕೆ ವಿಶ್ವನಾಥ್, ಚಿಕ್ಕಮಗಳೂರು ಜಿಲ್ಲಾ ಬೆಳೆಗಾರರ ಸಂಘದ ಅಧ್ಯಕ್ಷರಾದ ಕೆ ಯು ರತೀಶ್, ಹಾಸನ ಪ್ಲಾಂಟರ್ಸ್ ಅಸೋಷಿಯೇಷನ್ ಖಜಾಂಚಿ ಎಂ ಜೆ ಸಚಿನ್ ಹಾಗೂ ಮೂಡಿಗೆರೆ ತಾ ಬೆಳೆಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಕೆ ಡಿ ಮನೋಹರ್ ಇದ್ದರು.



