ನಿಂತಿದ್ದ ಕಂಟೇನರ್ ಗೆ ಕಾರು ಅಪ್ಪಳಿಸಿ ಯುವಕ ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ನಗರದಲ್ಲಿ ನಡೆದಿದೆ.
ಫೆಬ್ರವರಿ 17 ಮಂಗಳವಾರ ಬೆಳಗಿನ ಜಾವ ದೀಪಕ್ (31 ವರ್ಷ) ಎಂಬುವವರು ಕಾರಿನಲ್ಲಿ ಹೌಸಿಂಗ್ ಬೋರ್ಡ್ ನಲ್ಲಿರುವ ಬಾಡಿಗೆ ಮನೆಗೆ ತೆರಳುತ್ತಿದ್ದರು.ಚಿಕ್ಕಮಗಳೂರು ನಗರದ ಎಐಟಿ ಸರ್ಕಲ್ ಸಮೀಪದ ಮಹಾಲಕ್ಷ್ಮೀ ದೇವಸ್ಥಾನದ ಮುಂಭಾಗ ಕಂಟೇನರ್ ಅನ್ನು ಯಾವುದೇ ಸಿಗ್ನಲ್ ಇಲ್ಲದೇ ನಿಲ್ಲಿಸಲಾಗಿತ್ತು ಎನ್ನಲಾಗಿದೆ. ಈ ವಾಹನ ಕಾಣಿಸದೇ ದೀಪಕ್ ರವರ ಕಾರು ಕಂಟೇನರ್ ಗೆ ಡಿಕ್ಕಿಯಾಗಿದೆ. ತೀವ್ರ ಗಾಯಗೊಂಡಿದ್ದ ದೀಪಕ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮೃತ ದೀಪಕ್ ಬೇಲೂರು ತಾಲ್ಲೂಕು ದಬ್ಬೆ ಗ್ರಾಮದವರಾಗಿದ್ದ, ಚಿಕ್ಕಮಗಳೂರು ಹೌಸಿಂಗ್ ಬೋರ್ಡ್ ನಲ್ಲಿ ಹೋಟೆಲ್ ಇಟ್ಟುಕೊಂಡಿದ್ದರು ಎನ್ನಲಾಗಿದೆ. ಮಂಗಳವಾರ ರಾತ್ರಿ ಸ್ನೇಹಿತರೊಬ್ಬರನ್ನು ಬಸ್ಸಿಗೆ ಹತ್ತಿಸಿ ಚಿಕ್ಕಮಗಳೂರು ನಗರದಿಂದ ಹೌಸಿಂಗ್ ಬೋರ್ಡ್ ಕಡೆಗೆ ತನ್ನ ಕಾರಿನಲ್ಲಿ ಬರುವಾಗ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ದೀಪಕ್ ಗೆ ವಿವಾಹ ನಿಶ್ಚಯವು ಆಗಿತ್ತು ಎನ್ನಲಾಗಿದೆ.
ಕಂಟೈನರ್ ವಾಹನದಲ್ಲಿದ್ದ ಚಾಲಕ ಗಾಯಗೊಂಡಿದ್ದವರನ್ನು ಉಪಚರಿಸಿ ಚಿಕಿತ್ಸೆ ಕೊಡಿಸದೆ ಸ್ಥಳದಿಂದ ಪರಾರಿ ಆಗಿದ್ದಾನೆ.
ಈ ಸಂಬಂಧ ಮೃತ ದೀಪಕ್ ಅವರ ತಂದೆ ನಾಗರಾಜುಗೌಡ ವಾಸ- ದಬ್ಬೆ ಗ್ರಾಮ, ಅರೇಹಳ್ಳಿ ಹೋಬಳಿ ಬೇಲೂರು ತಾಲ್ಲೂಕು ರವರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅವರನ್ನು ತಮ್ಮ ದೂರಿನಲ್ಲಿ ದಿನಾಂಕ: 17.02.2026 ರಂದು ಬೆಳಗ್ಗಿನ ಜಾವ ಸುಮಾರು 02.10 ಗಂಟೆ ಸಮಯದಲ್ಲಿ ದೀಪಕ್ ರವರು ಕೆಎ-02-ಎಂಜೆ-8096 ರ ಕಾರಿನಲ್ಲಿ ಹೌಸಿಂಗ್ ಬೋರ್ಡ್ ನಲ್ಲಿರುವ ಬಾಡಿಗೆ ಮನೆಗೆ ಹೋಗಲೆಂದು ಚಿಕ್ಕಮಗಳೂರು ನಗರದ ಕಡೆಯಿಂದ ಎ ಐ ಟಿ ಸರ್ಕಲ್ ಕಡೆಗೆ ಕೆ ಎಂ ರಸ್ತೆಯ ಮಹಾಲಕ್ಷ್ಮೀ ದೇವಸ್ಥಾನದ ಮುಂಭಾಗ ಇರುವ ಲಕ್ಷ್ಮೀ ಹಾರ್ಡ್ವೇರ್ ಮುಂಭಾಗದಲ್ಲಿರುವ ಸಾರ್ವಜನಿಕ ಟಾರು ರಸ್ತೆಯಲ್ಲಿ ಎನ್.ಎಲ್. 01 ಕ್ಯೂ 1247 ಕಂಟೇನರ್ ಅನ್ನು ಅದರ ಚಾಲಕ ಯಾವುದೇ ಸಿಗ್ನಲ್ ಇಲ್ಲದೇ ರಸ್ತೆಯಲ್ಲಿ ಇತರರಿಗೆ ಅಪಾಯಕಾರಿಯಾಗುವ ರೀತಿಯಲ್ಲಿ ಯಾವುದೇ ಸಿಗ್ನಲ್ ಹಾಕದೆ ನಿಲ್ಲಿಸಿದ್ದರಿಂದ ಸದರಿ ವಾಹನ ಕಾಣಿಸದೇ ಇದ್ದು ಆ ವಾಹನಕ್ಕೆ ದೀಪಕ್ ರವರ ಕಾರು ಹೋಗಿ ಡಿಕ್ಕಿಯಾಗಿರುವುದಾಗಿ ಇದರ ಪರಿಣಾಮ ಅವನ ಮೈಕೈಗೆ ಕೈ ಕಾಲಿಗೆ ಪೆಟ್ಟಾಗಿ ಮೃತಪಟ್ಟಿರುತ್ತಾರೆ. ಅಪಘಾತ ಮಾಡಿದ ಕಾರಣನಾದ ಕಂಟೇನರ್ ವಾಹನದ ಚಾಲಕನ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ದೂರಿನ ಮೇರೆಗೆ ಚಿಕ್ಕಮಗಳೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.



