ಚಿಕ್ಕಮಗಳೂರು ನಗರದ ವಿಜಯಪುರದಲ್ಲಿ ಕಲ್ಲು ಎಸೆದ ಪ್ರಕರಣದಲ್ಲಿ ಕೋಮು ದ್ವೇಷದ ಧರ್ಮದ ಕಿಡಿ ಹಚ್ಚುವ ಮನಸ್ಥಿತಿಯಿಂದ ಬಿಜೆಪಿ ಹೊರಬರಬೇಕು ಎಂದು ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರೂ ಆದ ಹೆಚ್.ಪಿ.ಮಂಜೇಗೌಡ ಹೇಳಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಆರೋಪಿತರು ಯಾವುದೇ ಧರ್ಮದವರಾಗಿದ್ದರೂ ಕೂಡ ಮುಲಾಜಿಲ್ಲದೆ ಕ್ರಮ ಜರುಗಿಸುವಂತೆ ಶಾಸಕರಾದ ಹೆಚ್.ಡಿ.ತಮ್ಮಯ್ಯನವರು ಜಿಲ್ಲಾ ಪೆÇೀಲಿಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಐಜಿಪಿಯವರು ಕೂಡ ಚಿಕ್ಕಮಗಳೂರು ಭೇಟಿ ನೀಡಿ ಪ್ರಕರಣದ ಬಗ್ಗೆ ಮಾಹಿತಿ ಪಡೆದಿದ್ದಾರೆ ಎಂದು ತಿಳಿಸಿದರು.
ದಲಿತ ವಿರೋಧಿ ಬಿಜೆಪಿಯವರಿಗೆ ಇತ್ತೀಚೆಗೆ ದಲಿತ ಮೇಲೆ ಯಾಕಿಷ್ಟು ಕಾಳಜಿ ಮೂಡಿದೆ ಎಂಬ ಅನುಮಾನ ಕಾಡುತ್ತಿದೆ. ಅಷ್ಟೊಂದು ಕಾಳಜಿ ಇದ್ದಿದ್ದರೆ ಬಿಜೆಪಿ ನಾಯಕರೊಬ್ಬರು ಮೂಡಿಗೆರೆ ಮಾಜಿ ಶಾಸಕರಾದ ಎಂ.ಪಿ.ಕುಮಾರಸ್ವಾಮಿಯವರ ಮೇಲೆ ಹಲ್ಲೆ ಮಾಡಿದಾಗ ಕುರುವಂಗಿ ವೆಂಕಟೇಶ್ ಎಲ್ಲಿ ಅಡಗಿ ಕೂತಿದ್ದರು ಎಂಬ ಮಾಹಿತಿಯನ್ನು ತಿಳಿಸಲಿ ಎಂದು ಸವಾಲ್ ಹಾಕಿದರು.
ಅಷ್ಟೇ ಅಲ್ಲದೆ ಬಿಜೆಪಿಯ ಮಾರ್ಗದರ್ಶಿ ಸಂಸ್ಥೆ ಅಂಬೇಡ್ಕರ್ ವಿಚಾರಧಾರೆಗಳನ್ನು ಕೊಲ್ಲುವುದರಿಂದ ಹಿಡಿದು ಅವರ ಚುನಾವಣೆಯ ಸೋಲಿನ ಪ್ರಮುಖ ಪಾತ್ರ ವಹಿಸಿ, ಹಿಂದೂಕೋಡ್ ಬಿಲ್ ಗೆ ವಿರೋಧಿಸಿ, ಅಂಬೇಡ್ಕರ್ ಸಂವಿಧಾನ ಬದಲಾಯಿಸಲು ನಾವು ಅಧಿಕಾರಕ್ಕೆ ಬಂದಿದ್ದೇವೆ ಎಂದು ಬಹಿರಂಗವಾಗಿ ಹೇಳಿಕೆ ನೀಡಿದಾಗ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾದ ಗವಾಯಿ ಅವರ ಮೇಲೆ ಹಿಂದುತ್ವವಾದಿಯೊಬ್ಬ ಶೂ ಎಸೆದಾಗ ಈ ಬಿಜೆಪಿ ನಾಯಕರು ಯಾಕೆ ಬಾಯಿ ಬಿಡಲಿಲ್ಲ ಎಂದು ಪ್ರಶ್ನಿಸಿದರು.
ಅಂಬೇಡ್ಕರ್ ವಿರೋಧಿ ಸಂಘ ಪರಿವಾರ ಇತ್ತೀಚೆಗೆ ಅಂಬೇಡ್ಕರ್ ಫೆÇೀಟೋ ಹಾಕಿಕೊಂಡು ಹಿಂದೂ ಸಮಾಜೋತ್ಸವ ಕಾರ್ಯಕ್ರಮ ಮಾಡಿದಾಗ ಈ ಬಿಜೆಪಿ ನಾಯಕರು ಯಾಕೆ ಬಾಯಿ ಬಿಡಲಿಲ್ಲ. ಯಾವುದೇ ರಾಜಕೀಯ ಪಕ್ಷಗಳು ಸಮಾಜದಲ್ಲಿ ಅಹಿತಕರ ಘಟನೆಗಳು ನಡೆದಾಗ ಸಮಾಜದಲ್ಲಿ ಶಾಂತಿ ಮೂಡಿಸುವ ಕೆಲಸ ಮಾಡಬೇಕು. ಅದರ ಬದಲಾಗಿ ಕೋಮು ಸಂಘರ್ಷಕ್ಕೆ ಎಡೆಮಾಡಿಕೊಡುವುದು ಅತ್ಯಂತ ದುರಂತ ಎಂದರು.
ಬಿಜೆಪಿ ನಾಯಕರು ಹತಾಶೆಯಿಂದ ಎಲ್ಲಾ ಅಹಿತಕರ ಘಟನೆಗಳಿಗೆ ಶಾಸಕರ ಹೆಸರನ್ನು ತಳಕು ಹಾಕುವುದನ್ನು ಬಿಟ್ಟು ಸಮಾಜದಲ್ಲಿ ಶಾಂತಿ ನೆಲಸುವುದರ ಬಗ್ಗೆ ಯೋಚಿಸಲಿ ಜೊತೆಗೆ ಸಮಸಮಾಜವನ್ನು ಹೊಡೆಯುವ ಕೆಲಸವನ್ನು ಬಿಜೆಪಿ ಕೈಬಿಡಬೇಕೆಂದು ಒತ್ತಾಯಿಸಿದರು.
ಬಿಜೆಪಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಂದಾಗುತ್ತಿದೆ. ಚಿಕ್ಕಮಗಳೂರು ಶಾಂತಿ ಪ್ರಿಯ ಜಿಲ್ಲೆಯಾಗಿದ್ದು, ಜಿಲ್ಲೆಯಲ್ಲಿರುವ ಎಲ್ಲಾ ಸಮಾಜದವರು ಶಾಂತ ಭಾವನೆಯಿಂದ ಇರಬೇಕೆಂಬುದು ಕಾಂಗ್ರೆಸ್ ಪಕ್ಷದ ಆಶಯವಾಗಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಚಿಕ್ಕಮಗಳೂರು ಪ್ರಚಾರ ಸಮಿತಿ ಅಧ್ಯಕ್ಷ ಬೆಟ್ಟಗೆರೆ ಪ್ರವೀಣ್, ಕೆಪಿಸಿಸಿ ನೀತಿ ಸಂಶೋಧನಾ ವಿಭಾಗದ ಜಿಲ್ಲಾಧ್ಯಕ್ಷ ಹೆಚ್.ಎಸ್.ಶಿವಕುಮಾರ್, ಚಿಕ್ಕಮಗಳೂರು ಯುವ ಕಾಂಗ್ರೆಸ್ ಅಧ್ಯಕ್ಷ ಲಾಕೇಶ್, ನಗರಸಭಾ ಸದಸ್ಯರಾದ ಸಿ.ಪಿ.ಲಕ್ಷ್ಮಣ್, ಪರಮೇಶ್ ರಾಜ್ ಅರಸ್, ಸಿಡಿಎ ಸದಸ್ಯ ನೂರ್ ಅಹಮದ್, ಮುಖಂಡ ಯೋಗೀಶ್ ಉಪಸ್ಥಿತರಿದ್ದರು.



