ಮಲೆನಾಡಿನ ಚಿಕ್ಕಮಗಳೂರು ಜಿಲ್ಲೆಯ ಕಳಸ, ಬಾಳೆಹೊನ್ನೂರು, ಮೂಡಿಗೆರೆ, ಚಿಕ್ಕಮಗಳೂರು ಸುತ್ತಮುತ್ತ ಕಳೆದ ಕೆಲ ದಿನಗಳಿಂದ ಸಣ್ಣ ವಿಮಾನವೊಂದು ಅತ್ಯಂತ ಕೆಳಮಟ್ಟದಲ್ಲಿ ಹಾರಾಟ ನಡೆಸಿ ಸಾರ್ವಜನಿಕವಾಗಿ ಆತಂಕ ಸೃಷ್ಟಿಸಿರುವ ಬಗ್ಗೆ ವಿಧಾನ ಪರಿಷತ್ ಸದಸ್ಯೆ ಡಾ. ಆರತಿ ಕೃಷ್ಣರವರು ಪ್ರಶ್ನೆಯನ್ನು ಕೇಳಿದ್ದು ಈ ಸಂಬಂಧ ಗೃಹ ಸಚಿವರಾದ ಡಾ ಜಿ ಪರಮೇಶ್ವರ್ ಅವರು ವಿಧಾನ ಪರಿಷತ್ ನಲ್ಲಿ ಲಿಖಿತ ಉತ್ತರ ನೀಡಿದ್ದಾರೆ.

ಜಿಲ್ಲೆಗಳಲ್ಲಿ ಕಡಿಮೆ ಎತ್ತರದಲ್ಲಿ ವೈಜ್ಞಾನಿಕ ಹಾರಾಟ ಚಟುವಟಿಕೆಯನ್ನು ಮಾಡುವ ಸೆಸ್ನಾಕಾರವಾನ್ 208(ಬಿ) ವಿಮಾನಗಳನ್ನು ಮತ್ತು ಮ್ಯಾಗ್ನೆಟಿಕ್ ಗ್ರೇಡಿಯೋ ಮೀಟರ್ ಮತ್ತು ರೇಡಿಯೋ ಮೀಟರ್ ಸಂವೇಧಕವನ್ನು ಬಳಸಿ ಭೂ ವೈಜ್ಞಾನಿಕ ಮತ್ತು ಸಂಭಾವ್ಯ ಪ್ರದೇಶಗಳಲ್ಲಿ ಖನಿಜ ನಿಕ್ಷೇಪಗಳು ಇರುವ ಪ್ರದೇಶಗಳನ್ನು ಗುರುತಿಸಲು ಎಕ್ಸ್- ಕ್ಯಾಲಿಬರ್ ಏವಿಯೇಷನ್ ಕಂಪನಿಯವರಿಗೆ ಭಾರತ ಸರ್ಕಾರವು ಗುತ್ತಿಗೆ ನೀಡಿದೆ.
ಅದರಂತೆ ಎಕ್ಸ್-ಕ್ಯಾಲಿಬರ್ ಏವಿಯೇಷನ್ ಪ್ರೈವೇಟ್ ಲಿಮಿಟೆಡ್ ಕಂಪನಿಯವರು ಹಿಮಾಲಯನ್ ಹೆಲಿ ಸರ್ವೀಸ್ ಲಿಮಿಟೆಡ್, ನವದೆಹಲಿ ರವರ ಸಹಯೋಗದೊಂದಿಗೆ ಅಧಿಕೃತವಾಗಿ ಅನುಮತಿ ಪಡೆದು ಮ್ಯಾಗ್ನೆಟಿಕ್ ಗ್ರೇಡಿಯೋ ಮೀಟರ್ ಮತ್ತು ರೇಡಿಯೋ ಮೀಟರ್ ಸಂವೇಧಕವನ್ನು ಬಳಸಿ ಖನಿಜ ನಿಕ್ಷೇಪಗಳು ಇರುವ ಪ್ರದೇಶಗಳನ್ನು ಗುರುತಿಸುವ ಕಾರ್ಯವನ್ನು ಮಾಡುತ್ತಿದ್ದು ಸಮೀಕ್ಷೆ ನಡೆಸಲು ದಿನಾಂಕ:13.02.2026 ರಿಂದ 31.07.2026 ವರೆಗೆ ಕಾಲಾವಕಾಶವನ್ನು ನೀಡಿರುತ್ತಾರೆ ಎಂದು ಉತ್ತರ ನೀಡಿದ್ದಾರೆ.
ಈ ಕಾರ್ಯಚರಣೆಯ ಬಗ್ಗೆ ಜಿಲ್ಲಾ ಪೊಲೀಸ್ ಮುಖ್ಯಸ್ಥರಿಗೆ ಹಾಗೂ ಪೋಲೀಸ್ ಅಧಿಕ್ಷಕರಿಗೆ ಮಾಹಿತಿ ಇದ್ದು ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಲಾಗಿರುತ್ತದೆ ಎಂದು ಗೃಹ ಸಚಿವರು ತಿಳಿಸಿದ್ದಾರೆ.



