ರಾಜ್ಯ ಸರ್ಕಾರ ಕಾಫಿ ಬೆಳೆಗಾರರು ತಮ್ಮ ನೀರಾವರಿ ಪಂಪ್ ಸೆಟ್ ಗಳ ಬಾಬ್ತು ಬಾಕಿ ಇರುವ ಮೊತ್ತವನ್ನು ಪಾವತಿಸಿದರೆ DBT ಅಡಿಯಲ್ಲಿ ಬೆಳೆಗಾರರ ವಿದ್ಯುತ್ ಬಳಕೆ ಮೊತ್ತವನ್ನು ಅವರ ಖಾತೆಗೆ ಮರುಪಾವತಿ ಮಾಡುವ ಅವಕಾಶ ದೊರಕಿಸಿಕೊಟ್ಟಿತ್ತು.
ಆದರೆ ಬೆಳೆಗಾರರ ವಿದ್ಯುತ್ ಬಾಕಿಯ ಮೇಲಿನ ಬಡ್ಡಿಯ ಮೊತ್ತವೇ ಕೋಟ್ಯಾಂತರ ರೂಪಾಯಿಗಳಷ್ಟಾಗಿತ್ತು.
ಬೆಳೆಗಾರರ ಸಂಘಟನೆಗಳು ESCom ಗಳಿಗೆ ಒತ್ತಡ ಹೇರಿ ಬಾಕಿ ಹಾಗೂ ಬಡ್ಡಿ ಮನ್ನಾ ಮಾಡಿದರೆ ಬೆಳೆಗಾರರಿಗೆ DBT ಯೋಜನೆಗೆ ಅರ್ಹವಾಗಲು ಅನುಕೂಲವಾಗುತ್ತದೆ ಎಂದು ಹೇಳಿದ್ದವು.
ಈಗ MESCOM ತನ್ನ ವ್ಯಾಪ್ತಿಯ ಕಾಫಿ ಬೆಳೆಗಾರರ ವಿದ್ಯುತ್ ಬಾಕಿಯ ಮೇಲಿನ ಸುಮಾರು 4 ಕೋಟಿ ರೂಪಾಯಿಗಳಷ್ಟು ಬಡ್ಡಿ ವಿನಾಯ್ತಿ ನೀಡಿದೆ.
ಮೂರು ತಿಂಗಳ ಒಳಗಾಗಿ ಬಾಕಿ ಇರುವ ಅಸಲು ಪಾವತಿಸುವ ಬೆಳೆಗಾರರು DBT ವ್ಯಾಪ್ತಿಗೆ ಬರುತ್ತಾರೆ.
ಈಗಾಗಲೇ ಕಾರಣಾಂತರದಿಂದ ಅಸಲಿನ ಜೊತೆ ಬಡ್ಡಿಯನ್ನು ಕೂಡ ಪಾವತಿಸಿರುವ ಬೆಳೆಗಾರರಿಗೆ ಮುಂದಿನ ದಿನಾಂಕಗಳಲ್ಲಿ ಅವರ ವಿದ್ಯುತ್ ಬಿಲ್ ಗಳ ಮೊತ್ತದಲ್ಲಿ ಬಡ್ಡಿಯ ಮೊತ್ತವನ್ನು ಕ್ರಮೇಣ ಕಡಿತಗೊಳಿಸಿ ಸರಿದೂಗಿಸಲಾಗುವುದೆಂದು MEScom ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಬೆಳೆಗಾರರ ಸಂಘಟನೆಗಳು ಈ ಬಗ್ಗೆ ರಾಜ್ಯ ಇಂದನ ಸಚಿವ ಕೆ.ಜೆ. ಜಾರ್ಜ್ ಅವರನ್ನು ಭೇಟಿ ಮಾಡಿ ಹಲವು ಬಾರಿ ಮನವಿ ಪತ್ರ ಸಲ್ಲಿಸಿತ್ತು. ಇದೀಗ ಬೆಳೆಗಾರರ ಮನವಿಗೆ ಸ್ಪಂದಿಸಿ ಬಡ್ಡಿ ಮನ್ನಾ ಮಾಡಲಾಗಿದೆ.
ಈ ಸಂಬಂಧ ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಹಳಸೆ ಶಿವಣ್ಣ, ಕೆ.ಜಿ.ಎಫ್. ಮಾಜಿ ಅಧ್ಯಕ್ಷ ಬಿ.ಎಸ್. ಜಯರಾಂ, ಚಿಕ್ಕಮಗಳೂರು ಜಿಲ್ಲಾ ಬೆಳೆಗಾರರ ಸಂಘದ ಅಧ್ಯಕ್ಷ ರತೀಶ್ ಕುಮಾರ್, ಮೂಡಿಗೆರೆ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್. ಬಾಲಕೃಷ್ಣ ಸೇರಿದಂತೆ ವಿವಿಧ ಬೆಳೆಗಾರರ ಮತ್ತು ರೈತ ಸಂಘಟನೆಗಳ ಮುಖಂಡರು ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
ಮೂಡಿಗೆರೆ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್. ಬಾಲಕೃಷ್ಣ ಮಾಧ್ಯಮದೊಂದಿಗೆ ಮಾತನಾಡಿ ; ಕಾಫಿ ಬೆಳೆಗಾರರ ನೀರಾವರಿ ಪಂಪ್ ಸೆಟ್ ಗಳ ವಿದ್ಯುತ್ ಬಾಕಿಯ ಬಡ್ಡಿ ಮನ್ನಾ ಮಾಡಬೇಕೆಂದು ನಮ್ಮ ಪ್ರಮುಖ ಬೇಡಿಕೆಯಾಗಿತ್ತು. ಈಗ 10 ಹೆಚ್.ಪಿ. ವರೆಗಿನ ಪಂಪ್ ಸೆಟ್ ಗಳಿಗೆ ಅನ್ವಯವಾಗುವಂತೆ ಬಡ್ಡಿ ಮನ್ನಾ ಮಾಡಿದ್ದಾರೆ. ಇದಕ್ಕಾಗಿ ಸರ್ಕಾರಕ್ಕೆ ವಿಶೇಷವಾಗಿ ಇಂದನ ಸಚಿವ ಕೆ.ಜೆ.ಜಾರ್ಜ್ ಅವರಿಗೆ ಮತ್ತು ಮೆಸ್ಕಾಂ ಹಿರಿಯ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುತ್ತೇವೆ. 10 ಹೆಚ್.ಪಿ. ಗಿಂತ ಹೆಚ್ಚಿನ ನೀರಾವರಿ ಪಂಪ್ ಸೆಟ್ ಗಳಿಗೂ ಬಡ್ಡಿ ಮನ್ನಾ ಮಾಡಬೇಕು ಎಂಬುದು ಬೇಡಿಕೆಯಲ್ಲಿತ್ತು. ಮುಂದಿನ ದಿನಗಳಲ್ಲಿ ಅದನ್ನು ಕಾರ್ಯಗತಗೊಳಿಸಬೇಕು ಎಂದು ಒತ್ತಾಯಿಸುತ್ತೇವೆ.
ಇದೀಗ ಬಡ್ಡಿ ಮನ್ನಾ ಯೋಜನೆಲ್ಲಿ ಮೂರು ತಿಂಗಳ ಅವಧಿ ನೀಡಲಾಗಿದ್ದು, ಬೆಳೆಗಾರರು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಸಕಾಲದಲ್ಲಿ ಅಸಲು ಕಟ್ಟಿ ಬಡ್ಡಿ ಮನ್ನಾ ಸೌಲಭ್ಯ ಪಡೆಯಬೇಕೆಂದು ಮನವಿ ಮಾಡಿದ್ದಾರೆ.



