ಲಾಂಗ್ ಹಿಡಿದು ರೀಲ್ಸ್ ಮಾಡಿದ್ದ ಕನ್ನಡದ ಜನಪ್ರಿಯ ‘ಬಿಗ್ ಬಾಸ್’ ಖ್ಯಾತಿಯ ವಿನಯ್ ಗೌಡ ಹಾಗೂ ರಜತ್‌ರನ್ನು ಬೆಂಗಳೂರು ಬಸವೇಶ್ವರ ನಗರದ ಪೊಲೀಸರು ಬಂಧಿಸಿದ್ದಾರೆ.
ಮಾರಕಾಸ್ತ್ರ ಹಿಡಿದು ರೀಲ್ಸ್ ಮಾಡಿದ್ದ ವಿನಯ್ ಹಾಗೂ ರಜತ್ ಮೇಲೆ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಎಫ್‌ಐಆರ್ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಜತ್ ಮತ್ತು ವಿನಯ್ ಬಸವೇಶ್ವರ ನಗರ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಿದ್ದರು. ವಿಚಾರಣೆಯ ನಂತರ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಮಾರಕಾಸ್ತ್ರ ಹಿಡಿದು ರೀಲ್ಸ್ ಮಾಡಿದಕ್ಕೆ ಶಸ್ತ್ರಾಸ್ತ್ರ ಕಾಯ್ದೆಯಡಿ ವಿನಯ್ ಮತ್ತು ರಜತ್‌ರನ್ನು ನಿನ್ನೆ (ಮಾ.24) ಬಂಧಿಸಿದ್ದರು. ಆ ನಂತರ ಮಧ್ಯಾರಾತ್ರಿ ಅವರನ್ನು ಬಿಡುಗಡೆ ಮಾಡಿದ್ದರು. ಇಂದು ಮತ್ತೆ ವಿಚಾರಣೆಗೆ ಬಂದ ವೇಳೆ ರಜತ್ ಮತ್ತು ವಿನಯ್‌ರನ್ನು ಬಂಧಿಸಿದ್ದಾರೆ. ಠಾಣೆಗೆ ಬರುವ ಮುಂಚೆಯೇ ವಿಡಿಯೋ ಮೂಲಕ ರಜತ್ ಸ್ಪಷ್ಟನೆ ನೀಡುವ ಕೆಲಸ ಮಾಡಿದ್ದಾರೆ.
ನಮಸ್ಕಾರ, ನಾನು ಮತ್ತು ವಿನಯ್ ರೀಲ್ಸ್ ಮಾಡಿದ್ವಿ. ನಟರಾಗಿ ಆ ರೀಲ್ಸ್ ಮಾಡಿದ್ವಿ ಹೊರತು ಅದರಿಂದ ಜನ ಕೆಟ್ಟದ್ದು ಕಲಿಯಲಿ ಎಂಬ ಉದ್ದೇಶದಿಂದ ಮಾಡಿಲ್ಲ. ನಾವು ನಿನ್ನೆ ಠಾಣೆಯಲ್ಲಿದ್ದ ಕಾರಣ ಟಿವಿ ಸೆಟ್ ಅವರಿಗೆ ಹೇಳಿ ಪ್ರಾಪರ್ಟಿ ತರಿಸಿದ್ವಿ. ಯಾವುದು ಕಳುಹಿಸಿ ಕೊಟ್ರು, ಏನು ಕಳುಹಿಸಿ ಕೊಟ್ರು ಅನ್ನೋದು ನಮಗೂ ಗೊತ್ತಿಲ್ಲ. ಅಷ್ಟು ನೀಟಾಗಿ ನಾವು ಅದನ್ನು ನೋಡಿರಲಿಲ್ಲ. ಅದರಲ್ಲಿ ಏನೋ ತಪ್ಪಾಗಿದೆ ಅಂತ ಬಂತು ಎಂದು ರಜತ್ ಹೇಳಿದ್ದಾರೆ. ಇನ್ನೂ ಪೊಲೀಸರ ದಿಕ್ಕು ತಪ್ಪಿಸುವ ಕೆಲಸ ನಾವು ಮಾಡಿಲ್ಲ. ಈ ರೀಲ್ಸ್ ಅನ್ನು ಬೇಕಂತ ಮಾಡಿಲ್ಲ ಎಂದು ವಿಡಿಯೋ ಮೂಲಕ ರಜತ್ ಸ್ಪಷ್ಟನೆ ನೀಡಿದ್ದಾರೆ.
ರಜತ್ ಕಿಶನ್ ಜೊತೆ ನಟ ವಿನಯ್ ಗೌಡ ರೀಲ್ಸ್ ಮಾಡಿದ್ದಾರೆ. ಈ ರೀಲ್ಸ್‌ನಲ್ಲಿ ವಿನಯ್ ಗೌಡ ಲಾಂಗ್ ಹಿಡಿದು, ಕಣ್ಣಿಗೆ ಕೂಲಿಂಗ್ ಗ್ಲಾಸ್ ಹಾಕಿಕೊಂಡು ದರ್ಶನ್ ಅವರ ‘ಕರಿಯ’ ಸಿನಿಮಾದ ಸ್ಟೈಲ್‌ನಲ್ಲಿ ಸ್ಲೋ ಮೋಷನ್‌ನಲ್ಲಿ ನಡೆಯುತ್ತಿರುತ್ತಾರೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ.

ಬಸವೇಶ್ವರ ನಗರದಲ್ಲಿ ಸಾರ್ವಜನಿಕವಾಗಿ ಲಾಂಗ್ ಹಿಡಿದು ಭಯದ ವಾತಾವರಣ ಸೃಷ್ಟಿಸುವ ರೀಲ್ಸ್ ಮಾಡಿದ್ದು ಈಗ ಸಮಸ್ಯೆಗೆ ಕಾರಣವಾಗಿದೆ. ಅಲ್ಲದೇ ಈ ರೀಲ್ಸ್ ಅನ್ನು ಬುಜ್ಜಿ ಅನ್ನೋ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿದ್ದಾರೆ.
ಈಗ್ಗೆ ಕೆಲ ದಿನಗಳ ಹಿಂದೆ ಇನ್ನೊಬ್ಬ ಬಿಗ್ ಬಾಸ್ ಸ್ಪರ್ಧಿ ಡ್ರೋನ್ ಪ್ರತಾಪ್ ಕೆರೆಯಲ್ಲಿ ಸ್ಪೋಟಕ ಸಿಡಿಸಿ ರೀಲ್ಸ್ ಮಾಡಿದ್ದರಿಂದ ಕೇಸು ದಾಖಲಿಸಿಕೊಂಡು ಜೈಲು ಪಾಲಾಗಿದ್ದರು. ಇದೀಗ ಮತ್ತಿಬ್ಬರು ಬಿಗ್ ಬಾಸ್ ಸ್ಪರ್ಧಿಗಳು ರೀಲ್ಸ್ ವಿಚಾರದಲ್ಲಿ ಬಂಧನಕ್ಕೊಳಗಾಗಿದ್ದಾರೆ.



