ಹೈಟೆಕ್ ವಾಹನದಲ್ಲಿ ದನಗಳನ್ನು ತುಂಬಿಸಿ ಗೋಕಳ್ಳತನ ಮಾಡುತ್ತಿದ್ದ ಖತರ್ನಾಕ್ ತಂಡವನ್ನು ಬಂಧಿಸುವಲ್ಲಿ ಕಳಸ ಪೊಲೀಸರು ಯಶಸ್ವಿಯಾಗಿದ್ದಾರೆ.
ಜುಲೈ 10 ರಂದು ಕಳಸ ಭಾಗದಲ್ಲಿ ಗೋವುಗಳನ್ನು ಕಳ್ಳತನ ಮಾಡಲು ಬಂದಿದ್ದ ಖಚಿತ ಮಾಹಿತ ಮೇರೆಗೆ ಆರೋಪಿಗಳ ಜಾಡು ಹಿಡಿದು ಹೊರಟಿದ್ದ ಕಳಸ ಪೊಲೀಸ್ ರ ಮೇಲೆಗೆ ಕಾರನ್ನು ಹತ್ತಿಸುವ ಪ್ರಯತ್ನ ನಡೆಸಿದ್ದ ಪ್ರಕರಣ ನಡೆದಿತ್ತು. ಪೊಲೀಸರಿಂದ ತಪ್ಪಿಸಿಕೊಂಡು ಕತ್ತಲೆಯಲ್ಲಿ ಕಣ್ಮರೆಯಾಗಿದ್ದ ತಂಡದ ಐದು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಕಳಸ ಪೊಲೀಸ್ ಠಾಣಾ ಅ.ಕ್ರ 40/2025ರ ಗೋಹತ್ಯೆ ತಡೆ ಕಾಯ್ದೆ ಪ್ರಕರಣದಲ್ಲಿ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿ ಐದು ಮಂದಿಯನ್ನು ಬಂಧಿಸಿದ್ದಾರೆ.
ಬಂಧಿತರನ್ನು ಸೈಯದ್ ತೌಪಿಕ್ (21), ಅಬ್ದುಲ್ ಅಜಿಜ್ (32), ಅಬ್ದುಲ್ ಜಾವೇದ್ (34), ಸಲ್ಮಾನ್ ಖಾನ್ (22), ಶಾಹಿಲ್ (21) ಎಂದು ಗುರುತಿಸಲಾಗಿದೆ. ಇವರೆಲ್ಲರೂ ಶಿವಮೊಗ್ಗ ಮತ್ತು ಭದ್ರಾವತಿ ಮೂಲದವರಾಗಿದ್ದಾರೆ.
ಆರೋಪಿಗಳು ಹಿಂದೆ ಚಿಕ್ಕಮಗಳೂರು, ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಗಳಲ್ಲಿ ದನ ಕಳ್ಳತನ ಪ್ರಕರಣಗಳಲ್ಲಿ ತೊಡಗಿಸಿಕೊಂಡಿದ್ದವರು ಎಂಬುದು ತನಿಖೆಯಿಂದ ಬಹಿರಂಗವಾಗಿದೆ.
ಘಟನೆಯಲ್ಲಿ ಬಳಸಲಾದ KA03 MB5643 ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.
ಗೋಕಳ್ಳರನ್ನು ಪತ್ತೆಹಚ್ಚುವಲ್ಲಿ ಕಳಸ ಠಾಣೆಯ ಠಾಣಾಧಿಕಾರಿ ಚಂದ್ರಶೇಖರ್, ಸಿಬ್ಬಂದಿಗಳಾದ ಗಿರೀಶ್, ಶಿವಕುಮಾರ್, ನಿಖಿಲ್, ಸಿದ್ದಪ್ಪ ಕರಂಡಿ, ಪ್ರಮೋದ್, ವಿನಯ್ ಅವರು ಸತತ ಪ್ರಯತ್ನ ನಡೆಸಿದ್ದರು.



