ಮೂಡಿಗೆರೆ ತಾಲ್ಲೂಕಿನ ಬಿದರಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಾರ್ಮಕ್ಕಿ (ಗುಣಿಬೈಲ್) ಗ್ರಾಮದಲ್ಲಿ ಸ್ಮಶಾನಕ್ಕೆ ದಾರಿಯಿಲ್ಲದೇ ಜನರು ಬಹಳ ಪರದಾಟ ನಡೆಸುತ್ತಿದ್ದರು. ಸ್ಮಶಾನಕ್ಕೆ ಜಾಗವಿದ್ದರೂ ಅದರ ನಿರ್ವಹಣೆಯಿಲ್ಲದೇ ಮತ್ತು ದಾರಿಯ ವ್ಯವಸ್ಥೆಯಿಲ್ಲದೇ ಇಲ್ಲಿನ ನಿವಾಸಿಗಳು ತುಂಬಾ ತೊಂದರೆ ಅನುಭವಿಸುತ್ತಿದ್ದರು.
ಹಲವು ಬಾರಿ ಮನವಿ ಮಾಡಿದ್ದರೂ ಸರ್ಕಾರದಿಂದ ಸ್ಮಶಾನದ ರಸ್ತೆ ನಿರ್ಮಾಣಕ್ಕೆ ಯಾವುದೇ ಅನುದಾನ ಸಿಕ್ಕಿರಲಿಲ್ಲ. ಇದೀಗ ಗ್ರಾಮಸ್ಥರೇ ಸೇರಿ ತಮ್ಮದೇ ಹಣವನ್ನು ಕ್ರೂಡೀಕರಿಸಿ ಜೆಸಿಬಿ ಬಳಸಿ ಸ್ಮಶಾನದ ಜಾಗವನ್ನು ಸ್ವಚ್ಚಗೊಳಿಸುವ ಜೊತೆಗೆ ಸ್ಮಶಾನಕ್ಕೆ ರಸ್ತೆಯನ್ನು ನಿರ್ಮಿಸಿದ್ದಾರೆ. ಈ ಕಾರ್ಯದಲ್ಲಿ ಗ್ರಾಮದ ನಿವಾಸಿ ಪ್ರಸ್ತುತ ದೆಹಲಿ ವಾಯುನೆಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಪುನೀತ್ ಅವರು ಗ್ರಾಮಸ್ಥರಿಗೆ ಪ್ರೇರಣೆ ನೀಡಿದ್ದಾರೆ.
ಪುನೀತ್ ಅವರು ಕಳೆದ ವರ್ಷ ತಮ್ಮ ತಂದೆಯವರ ಅಕಾಲಿಕ ನಿಧನದ ವೇಳೆ ಅವರ ಅಂತಿಮ ಸಂಸ್ಕಾರದ ವೇಳೆ ಅನುಭವಿಸಿದ ಸಂಕಷ್ಟದಿಂದ ಮನನೊಂದು ತಮ್ಮ ಗ್ರಾಮದ ಸ್ಮಶಾನಕ್ಕೆ ಕಾಯಕಲ್ಪ ನೀಡಲು ಗ್ರಾಮಸ್ಥರ ಜೊತೆ ಸೇರಿ ಪ್ರಯತ್ನಿಸಿದ್ದಾರೆ.

ಈ ಸಂದರ್ಭದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಪುನೀತ್ : ಕಳೆದ ನವೆಂಬರ್ 22ನೇ ತಾರೀಕು ನಮ್ಮ ತಂದೆಯವರು ಆಕಸ್ಮಿಕ ರಸ್ತೆ ಅಪಘಾತದಲ್ಲಿ ಮೃತರಾಗಿದ್ದರು. ಆ ಸಮಯದಲ್ಲಿ ನಾನು ದೆಹಲಿಯ ವಾಯು ನೆಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದು ಸುದ್ದಿ ತಿಳಿದಿದ್ದರಿಂದ ತುರ್ತಾಗಿ ಊರಿಗೆ ಬರುವಂತಾಗಿತ್ತು.
ರಾತ್ರಿ ಸುಮಾರು 2:00ಗೆ ನಾನು ನನ್ನ ಊರನ್ನು ತಲುಪಿದಾಗ ಆಕಾಶವೇ ಕಳಚಿ ಬಿದ್ದಂತ ಪರಿಸ್ಥಿತಿ ನನ್ನ ಮೇಲೆ ಇತ್ತು ಇಂಥ ಕ್ಲಿಷ್ಟಕರ ಸಂದರ್ಭದಲ್ಲಿ ನನ್ನ ಸಂಪೂರ್ಣ ಕುಲಬಾಂಧವರು ನನ್ನ ಜೊತೆ ಇದ್ದಿದ್ದು ನನಗೆ ತುಂಬಾ ಸಂತೋಷದ ವಿಷಯ.
ನವೆಂಬರ್ 23 ನೇ ತಾರೀಕು ನಮ್ಮ ತಂದೆಯ ಅಂತ್ಯ ಸಂಸ್ಕಾರ ಎಂದು ನಮ್ಮ ಜಾತಿಗೆ ಮೀಸಲಿರಿಸಿದ್ದ ಸ್ಮಶಾನದಲ್ಲಿ ಸಿದ್ಧತೆಗಳನ್ನು ಮಾಡುವ ಸಲುವಾಗಿ ನಾನು ನಮ್ಮ ಹಿರಿಯರಲ್ಲಿ ವಿನಂತಿಸಿ ಕೊಂಡಾಗ ಪ್ರಸ್ತುತ ಆ ಜಾಗಕ್ಕೆ ಹೋಗಲು ಯಾವುದೇ ರೀತಿಯ ರಸ್ತೆ ವ್ಯವಸ್ಥೆ ಇಲ್ಲ ಹಾಗೂ ಸುಮಾರು ವರ್ಷಗಳಿಂದ ಅಲ್ಲಿ ಹೋಗಲಾಗುತ್ತಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡಿರುತ್ತಾರೆ.
ಗುಣಿಬೈಲ್ ನಲ್ಲಿ ಇರುವಂತಹ ಸ್ಮಶಾನವು ಸುಮಾರು 150 -200 ವರ್ಷಗಳ ಹಳೆಯದು ನಮ್ಮ ಜಾತಿಯ ಹಲವು ತಲೆಮಾರುಗಳ ನೆನಪುಗಳು ಸಹ ಆ ಜಾಗದಲ್ಲಿ ಉಳಿದಿದೆ. ನಮ್ಮ ತಂದೆಯವರ ಕೊನೆಯ ವಿಧಿ ವಿಧಾನಗಳನ್ನು ಅಲ್ಲೇ ನೆರವೇರಿಸಬೇಕೆಂಬುದು ನನ್ನ ಆಸೆ. ಏನಾದರೂ ಆಗಲಿ ಮಾಡುವುದಾದರೆ ಅಲ್ಲೇ ಮಾಡಬೇಕೆಂದು ನಾನು ಹಠ ಹಿಡಿದಾಗ ಊರಿನ ಕೆಲವರೆಲ್ಲ ನನ್ನ ಮನವೊಲಿಸಲು ಪ್ರಯತ್ನಿಸಿರುತ್ತಾರೆ . ಅದಕ್ಕೂ ನಾನು ಒಪ್ಪದಿದ್ದಾಗ ನಾನೇ ಖುದ್ದಾಗಿ ಜಾಗಕ್ಕೆ ಹೋಗಬೇಕಾಗಿ ಬಂದಂತ ಪರಿಸ್ಥಿತಿ ಬರುತ್ತದೆ. ಆ ಜಾಗಕ್ಕೆ ಹೋಗುವಾಗ ತುಂಬಾ ತೊಂದರೆಗಳನ್ನು ನನ್ನ ಜೊತೆ ಬಂದವರು ಸಹ ಅನುಭವಿಸಿದ್ದಾರೆ.
ಸರಿಯಾದ ರಸ್ತೆ ಇಲ್ಲ ಮುಳ್ಳು ಕಾಡು ಜಾತಿಯ ಹುಲ್ಲು ಸಂಪೂರ್ಣವಾಗಿ ಆವರಿಸಿತ್ತು, ಅದೃಷ್ಟಾವಷತ್ ಪಕ್ಕದ ತೋಟದ ಮಾಲೀಕರು ಒಬ್ಬರು ನಮ್ಮ ತಂದೆಯ ಸ್ನೇಹಿತರಾಗಿದ್ದರಿಂದ ತಾವು ದಯಮಾಡಿ ನನಗೆ ಅವಕಾಶ ಮಾಡಿಕೊಡಬೇಕೆಂದು ನಾನು ಅವರಲ್ಲಿ ಕೇಳಿಕೊಂಡಾಗ ಅವರು ತಮ್ಮದೇ ತೋಟದ ಮೂಲಕ ಆ ಜಾಗದ ಬಳಿ ಹೋಗಬಹುದೆಂದು ತಿಳಿಸಿದ್ದು . ಅದರಂತೆ ಊರಿನವರಿಗೆ ಮನವೊಲಿಸಿ ದಯಮಾಡಿ ಅಂತಿಮ ಕಾರ್ಯಕ್ಕೆ ಎಲ್ಲಾ ರೀತಿಯ ಸಹಾಯಗಳನ್ನು ನೀಡಬೇಕೆಂದು ಆ ಸಮಯದಲ್ಲಿ ಕೋರಿಕೊಂಡಿದ್ದು ಅದರಂತೆ ಸ್ಮಶಾನದ ಅಂಚಿನಲ್ಲಿ ನಮ್ಮ ತಂದೆಯ ವಿಧಿ ವಿಧಾನಗಳನ್ನು ನಾನು ಮುಗಿಸಿದ್ದು ಆ ಕ್ಷಣಕ್ಕೆ ಮನಸ್ಸಿಗೆ ಸ್ವಲ್ಪ ಸಮಾಧಾನವನ್ನು ನೀಡಿತ್ತು.
ಮುಂದುವರಿದು ಹಲವು ತಿಂಗಳುಗಳವರೆಗೆ ನಾನು ಯೋಚಿಸಿದಾಗ ನನಗೆ ಆದಂಥ ಪರಿಸ್ಥಿತಿ ನಾಳೆ ದಿನ ನಮ್ಮ ಊರಿನಲ್ಲಿ ಬೇರೆ ಯಾರಿಗೂ ಆಗಬಾರದೆಂದು ಬಯಸಿ ನಾನೇ ಖುದ್ದಾಗಿ ನಮ್ಮ ಕುಲಬಾಂಧವರ ಮನೆ ಮನೆಗಳಿಗೆ ಹೋಗಿ ಈ ಜಾಗವನ್ನು ನಾವೆಲ್ಲ ಒಟ್ಟಾಗಿ ಸೇರಿ ಸರಿ ಮಾಡೋಣ ಎಂದು ಕೇಳಿಕೊಂಡಾಗ ಹಲವರಲ್ಲಿ ಮಿಶ್ರ ಪ್ರತಿಕ್ರಿಯೆ ಉಂಟಾಗಿ ಗೊಂದಲಗಳು ಸೃಷ್ಟಿಯಾಗಿ ಕೆಲಸವೂ ನೆನೆಗುದಿಗೆ ಬಿದ್ದಿತ್ತು.
ಈ ಬಾರಿ ನಾನು ರಜೆ ಮೇಲೆ ಇದ್ದಿದ್ದರಿಂದ ನಾನೇ ಖುದ್ದು ಜೆಸಿಬಿಯನ್ನು ಕರೆಸಿ ಸ್ಮಶಾನದ ಜಾಗವನ್ನು ಸುಮಾರು ನೂರು ಗಂಟೆಗಳ ಕಾಲ ಕ್ಲೀನ್ ಮಾಡಿಸಲು ಮುಂದಾಗಿರುತ್ತೇನೆ. ಇದೇ ಸಮಯಕ್ಕೆ ನಮ್ಮಲ್ಲೇ ಕೆಲವು ಹಿರಿಯರು ನನ್ನ ಬೆಂಬಲಕ್ಕೆ ಬಂದು ನನ್ನ ಜೊತೆಗೂಡಿ 100 ಗಂಟೆಗಳ ಕಾಲ ಸತತ ನನ್ನ ಜೊತೆಗಿದ್ದು ಆ ಜಾಗವನ್ನು ಸಂಪೂರ್ಣ ಸರಿ ಮಾಡಿ ರಸ್ತೆಯ ವ್ಯವಸ್ಥೆಯನ್ನು ಕೂಡ ಮಾಡಿರುತ್ತೇವೆ ಎಂದಿದ್ದಾರೆ.
ಪುನೀತ್ ಅವರ ಸಾಮಾಜಿಕ ಕಾಳಜಿ ಮತ್ತು ಅವರಿಗೆ ಸಾಥ್ ನೀಡಿದ ಗ್ರಾಮಸ್ಥರ ನಿಲುವು ಶ್ಲಾಘನೀಯವಾಗಿದ್ದು, ಸರ್ಕಾರ ಈ ಸ್ಮಶಾನಕ್ಕೆ ಸುಸಜ್ಜಿತ ರಸ್ತೆ ನಿರ್ಮಿಸಿಕೊಡುವುದರ ಮೂಲಕ ಗ್ರಾಮಸ್ಥರ ಮನವಿಗೆ ಸ್ಪಂದಿಸಬೇಕಾಗಿದೆ.




