
ಲೇಖನ : ಪ್ರಸನ್ನ ಗೌಡಹಳ್ಳಿ
ತೇಜಸ್ವಿಯವರು ನಮ್ಮೊಂದಿಗಿದ್ದಿದ್ದರೆ ಇಂದವರಿಗೆ 87 ವರ್ಷ, ಅವರು ದೈಹಿಕವಾಗಿ ನಮ್ಮೊಂದಿಗಿಲ್ಲದಿದ್ದರೂ ಅವರ ಕೃತಿಗಳ ಮೂಲಕ ಕಾರ್ಯಗಳ ಮೂಲಕ ಸದಾ ಚಿರಸ್ಥಾಯಿಯಾಗಿದ್ದಾರೆ.
ತೇಜಸ್ವಿಯವರೊಂದಿಗಿನ ನನ್ನ ಅಲ್ಪಕಾಲದ ಒಡನಾಟ ಮತ್ತು ಅವರ ಮಾಯಾಲೋಕ ಕೃತಿಯಲ್ಲಿ ನಾನು ಕಂಡ ನವಿರಾದ ಮಲೆನಾಡಿನ ಚಿತ್ರಗಳ ಅವಲೋಕನ
ತೇಜಸ್ವಿಯವರ ಕೆಲವು ಕೃತಿಗಳನ್ನು ಓದುತ್ತಿದ್ದಾಗ ಅದರಲ್ಲಿ ಬರುವ ಘಟನೆಗಳು ಇಲ್ಲೇ ಎಲ್ಲೋ ನಮ್ಮ ಅಕ್ಕಪಕ್ಕದಲ್ಲೇ ನಡೆದ ಘಟನೆಗಳೇನೋ ಎಂದು ನನಗನಿಸುತ್ತಿತ್ತು. ಅವರ ಪರಿಸರದ ಕತೆ ಓದಿದಾಗ ಇದು ಹೇಗೆ ಇವರು ನೈಜವಾದ ಜನರ ದಿನನಿತ್ಯದ ಚಟುವಟಿಕೆಯನ್ನು ಇಷ್ಟು ಸರಳವಾಗಿ ಬರ್ದಿದ್ದಾರಲ್ಲಾ ಅಂತ ಅನ್ನಿಸ್ತಿತ್ತು. ಜನಾ ನೋಡಿದ್ರೆ ತೇಜಸ್ವಿ ಯಾರತ್ರನೂ ಮಾತಾಡಲ್ಲ ಅನ್ತಾರೆ ಆದ್ರೆ ಜನಸಾಮಾನ್ಯರ ಬದುಕನ್ನು ಹೇಗೆ ಇಷ್ಟು ಚೆನ್ನಾಗಿ ಗ್ರಹಿಸಿದ್ದಾರೆ ಅಂತ ನನಗೆ ತುಂಬಾ ಆಶ್ಚರ್ಯ ಆಗ್ತಿತ್ತು. ಆದರೆ ಮಾಯಾಲೋಕ ಓದುವ ಹೊತ್ತಿಗೆ ನನ್ನ ಅಭಿಪ್ರಾಯಗಳು ಬದಲಾಗಿದ್ವು. ತೇಜಸ್ವಿಯವರ ಬಗ್ಗೆ ಸಮಾಜ ಸೃಷ್ಟಿಸಿಕೊಂಡಿದ್ದ ಕಪೋಲಕಲ್ಪಿತ ಭಾವನೆಯ ಪೊರೆಯಿಂದ ಹೊರಬಂದಿದ್ದೆ. ಏಕೆಂದರೆ ಮಾಯಾಲೋಕ ಪ್ರಕಟವಾಗುವ ಹೊತ್ತಿಗಾಗಲೇ ನಾನು ನಾಲ್ಕೈದು ವರ್ಷಗಳಿಂದ ತೇಜಸ್ವಿಯವರೊಂದಿಗೆ ಹತ್ತಿರದ ಒಡನಾಟವನ್ನು ಸಾಧಿಸಿದ್ದೆ. ಹಾಗಾಗಿ ತೇಜಸ್ವಿ ನಿಜವಾಗಿಯೂ ಏನು ಎನ್ನುವುದು ನನಗೆ ಅರಿವಾಗಿತ್ತು.
ಇವತ್ತಿಗೂ ಅನೇಕ ಜನರಲ್ಲಿ ತೇಜಸ್ವಿಯವರ ಬಗೆಗೆ ಇಂತಹ ಪೂರ್ವಾಗ್ರಹ ಕಲ್ಪಿತ ಮನಸ್ಥಿತಿ ಇದೆ. ನಿಜಕ್ಕೂ ತೇಜಸ್ವಿ ಸಾಮಾನ್ಯರೊಳಗೆ ಸಾಮಾನ್ಯರಾಗಿದ್ರು ಎಂಬುದಕ್ಕೆ ಅವರ ಮಾಯಲೋಕ ಕೃತಿ ಬಹುದೊಡ್ಡ ಸಾಕ್ಷಿ. ಇದಕ್ಕೆ ನನ್ನದೇ ಕೆಲವು ಅನುಭವಗಳನ್ನ ಹೇಳುವುದಾದರೆ.
ತೊಂಬತ್ತರ ದಶಕದ ವರ್ಷಗಳಲ್ಲಿ ಮೂಡಿಗೆರೆ ಪಟ್ಟಣದಲ್ಲಿ ತಮ್ಮ ಸ್ಕೂಟಿಯಲ್ಲಿ ಓಡಾಡುತ್ತಿದ್ದ ತೇಜಸ್ವಿಯವರನ್ನು ಕುತೂಹಲದಿಂದ ದೂರದಿಂದಲೇ ನೋಡಿ ಬೆರಗಾಗುತ್ತಿದ್ದೆ. ನನಗೆ ಕೈಗೆಟುಕುವಷ್ಟು ಹತ್ತಿರದಲ್ಲಿದ್ದರು ಅವರನ್ನ ಮಾತನಾಡಿಸುವುದಾಗಲಿ, ಅವರ ಮನೆಗೆ ಭೇಟಿ ನೀಡುವ ಪ್ರಯತ್ನವನ್ನಾಗಲಿ ಮಾಡಿರಲಿಲ್ಲ.
ಅ ನಂತ್ರ ನಾವು ಮೂಡಿಗೆರೆಯಲ್ಲಿ ಮಿತ್ರ ಧನಂಜಯ ಜೀವಾಳ ಮುಂದಾಳತ್ವದಲ್ಲಿ ನೇಚರ್ ಕ್ಲಬ್ ಸಂಘಟನೆ ಮಾಡಿದಾಗ ಅದರ ಅನೇಕ ಕಾರ್ಯಕ್ರಮಗಳಿಗೆ ತೇಜಸ್ವಿಯವರು ಭಾಗವಹಿಸುತ್ತಿದ್ದರು ಸಹ ವೈಯುಕ್ತಿಕ ನನಗೆ ಹೆಚ್ಚು ಪರಿಚಯ ಆಗಿರಲಿಲ್ಲ.
ಹೀಗಿರುವಾಗ 2001ರಲ್ಲಿ ಮೂಡಿಗೆರೆ ನಾನು ದರ್ಪಣ ಹೆಸರಿನಲ್ಲಿ ಪಾಕ್ಷಿಕ ಪತ್ರಿಕೆ ಪ್ರಾರಂಭಿಸಿದೆ. ತೇಜಸ್ವಿಯವರ ಮನೆಗೂ ಅಂಚೆ ಮೂಲಕ ಪತ್ರಿಕೆಯ ಒಂದು ಪ್ರತಿಯನ್ನು ಕಳುಹಿಸಿಕೊಡುತ್ತಿದ್ದೆ. ಪ್ರಥಮ ವಾರ್ಷಿಕ ಸಂಚಿಕೆಗೆ ಲೇಖನ ಕೇಳಲು ಗೆಳೆಯ ಧನಂಜಯ ಜೀವಾಳ ಅವರೊಂದಿಗೆ ಹೋಗಿದ್ದೆ, ಆಗ ಅವರು ಮನೆಯ ಮಹಡಿಯಲ್ಲಿ ಕಂಪ್ಯೂಟರ್ ಬಿಚ್ಚಿ ಹಾಕಿಕೊಂಡು ಏನೋ ರಿಪೇರಿ ಕೆಲಸದಲ್ಲಿ ನಿರತರಾಗಿದ್ದರು. ಈಗ ಹೊಸ ಲೇಖನ ಬರೆಯೋಕೆ ಪುರುಸೊತ್ತು ಇಲ್ಲ ಮಾರಾಯ…ನಾನು ಬರೆದಿರೋದರಲ್ಲೇ ಯಾವುದಾದ್ರು ಹಾಕಿಕೋ ಎಂದರು. ನಂತರ ನಾನು ಅವರ ‘ಹೊಸದಿಗಂತದೆಡೆಗೆ’ ಎಂಬ ಅಬಚೂರಿನ ಪೋಸ್ಟಾಪೀಸು ಕೃತಿಯ ಲೇಖಕರ ನುಡಿಯನ್ನು ದರ್ಪಣ ವಿಶೇಷ ಸಂಚಿಕೆಗೆ ಬಳಸಿಕೊಂಡಿದ್ದೆ. ಪತ್ರಿಕೆಯ ಪ್ರಥಮ ವಾರ್ಷಿಕೋತ್ಸವದಲ್ಲಿ ಮೂಡಿಗೆರೆ ಜೇಸಿ ಭವನದಲ್ಲಿ ಪ್ರೇಕ್ಷಕರ ಸಾಲಿನಲ್ಲಿ ಬಂದು ಕುಳಿತ್ತದ್ದು ಈಗಲೂ ಮನಸ್ಸನ್ನು ಪುಳಕಗೊಳಿಸುತ್ತದೆ.
ಒಮ್ಮೆ ಹೀಗೆ ಮೂಡಿಗೆರೆ ಗೆಂಡೇಹಳ್ಳಿ ರಸ್ತೆಯಲಿ ನಮ್ಮ ಕಛೇರಿ ಮುಂಭಾಗದಲ್ಲಿ ಸ್ಕೂಟರ್ ಒಂದು ನಿರಂತರ ಹಾರ್ನ್ ಆಗುತ್ತಿದ್ದಾಗ ಹೊರಬಂದು ನೋಡಿದರೆ ಸಾಕ್ಷಾತ್ ತೇಜಸ್ವಿಯವರು ಅಲ್ಲಿ ಪ್ರತ್ಯಕ್ಷ. ನನಗೆ ಪತ್ರಿಕೆ ಕಳಿಸುತ್ತಿದ್ದೀಯ ಮಾರಾಯ ಅದ್ರುದು ಎಷ್ಟು ದುಡ್ಡು ಎಂದು ಕೇಳಿ ಪಾವತಿಸಿದ್ದರು. ನಮ್ಮ ಕಛೇರಿ ಮುಂಭಾಗದಲ್ಲೇ ಇದ್ದ ಸೀಮೆ ಎಣ್ಣೆ ಅಂಗಡಿಗೆ ಬಂದವರು ನಮ್ಮ ಪತ್ರಿಕೆ ಬೋರ್ಡ್ ನೋಡಿ ಬಂದಿದ್ದರು.
ಅವರು ನಿಧನರಾಗುವ ಹಿಂದಿನ ದಿನ ಮೂಡಿಗೆರೆ ಕುಂದೂರು ಕಾಂಪ್ಲೆಕ್ಸ್ ಹತ್ತಿರ ಸಿಕ್ಕಿ ಕೊನೆಯದಾಗಿ ಮಾತನಾಡಿದ್ದು. ನಿನ್ನನ್ನು ನೆನಪಿಸಿಕೊಳ್ಳುತ್ತಿದ್ದೆ ಮಾರಾಯ, ನನ್ ಮಗ್ಳು ಮನೆಗೆ ಬೆಂಗಳೂರಿಗೆ ಕೆಲಸಕ್ಕೆ ಒಬ್ರು ಹೆಂಗಸು ಬೇಕು, ಸಿಕ್ತಾ ಇಲ್ಲ ಅದಕ್ಕು ನಿನ್ ಪೇಪರ್ ಗೆ ಹಾಕ್ಸೋಣ ಅಂತ ಯೋಚ್ನೆ ಮಾಡ್ತಿದ್ದೆ ಅಂದ್ರು, ಆಯ್ತು ಸಾರ್ ಹಾಕೋಣ ಅಂದಿದ್ದೆ. ಅದೇ ಅವರೊಂದಿಗಿನ ನನ್ನ ಕೊನೆ ಸಂಭಾಷಣೆ.
ಆದರೆ ಮರುದಿನ ತೇಜಸ್ವಿಯವರು ಇಹಲೋಕದ ಯಾತ್ರೆ ಮುಗಿಸಿದ್ದರು. ಅವರೊಂದಿಗೆ ನನ್ನ ಒಡನಾಟ ಹತ್ತಿರವಾಗುತ್ತಿದ್ದಾಗ ಅವರು ನಮ್ಮನ್ನು ಅಗಲಿದರು. ಅವರ ಅಗಲಿಕೆ ಕನ್ನಡ ನಾಡಿಗೆ ದೊಡ್ಡ ಆಘಾತ.

ತೇಜಸ್ವಿಯವರೊಂದಿಗಿನ ಈ ಒಡನಾಟ ನನ್ನ ಮನಸ್ಸನಲ್ಲಿ ಅವರ ಬಗ್ಗೆ ಇದ್ದ ಎಲ್ಲಾ ಹುಸಿ ಭಾವನೆಗಳು ಮಂಜಿನಂತೆ ಕರಗಿಹೋಗಿ ಅವರನ್ನು ಮತ್ತು ಅವರ ಸಾಹಿತ್ಯವನ್ನು ನೋಡುವ ದೃಷ್ಟಿಕೋನವೇ ಬದಲಾಗಿತ್ತು. ಹಾಗಾಗಿ ಅವರ ಕೊನೆಯ ಕೃತಿ “ಮಾಯಾಲೋಕ” ಓದುವಾಗ ಆ ಕೃತಿಯನ್ನು ಮತ್ತು ತೇಜಸ್ವಿಯವರನ್ನು ಗ್ರಹಿಸುವುದು ಬಹಳ ಸುಲಭವಾಗಿತ್ತು. ಮಾಯಾಲೋಕದಲ್ಲಿ ಬರುವ ಬಹುಮುಖ್ಯ ಪಾತ್ರ ಪ್ರಶಾಶವಾಣಿ ಪತ್ರಿಕೆ ಸಂಪಾದಕ ಪ್ರಕಾಶ ನಾನೇ ಏನೋ ಎನ್ನುವಷ್ಟು ತಲ್ಲೀನತೆ ಹಾಗೂ ಇಡೀ ಕಾದಂಬರಿಯ ಎಲ್ಲಾ ದೃಶ್ಯಗಳು ನನ್ನ ಕಣ್ಣೆದುರೆ ನಡೆಯುತ್ತಿವೆ ಏನೋ ಎನ್ನುವಷ್ಟು ವಾಸ್ತವ ಚಿತ್ರಣಗಳು ಅದರಲ್ಲಿ ನನಗೆ ಕಾಣಿಸುತ್ತಿತ್ತು. ಇವತ್ತಿಗೂ ನಾನು ಸಮಯ ಸಿಕ್ಕಾಗಲೆಲ್ಲ ಮತ್ತೆ ಮತ್ತೆ ಓದುವುದು ತೇಜಸ್ವಿಯವರ ಪರಿಸರ ಕತೆ ಮತ್ತು ಮಾಯಲೋಕ ಕೃತಿಗಳನ್ನ. ಪರಿಸರದ ಕತೆಯ ಗಾಡ್ಲಿ ಕತೆಯಂತು ಸಖತ್, ಇವತ್ತಿಗೂ ನಾನು ಪರಿಸರದ ಕತೆಯಲ್ಲಿ ಮೊದಲು ಓದುವುದು ಗಾಡ್ಲಿ ಕತೆಯನ್ನ. ಅದರ ಒಂದು ಪ್ರಸಂಗ ನನ್ನನ್ನು ಬಿದ್ದು ಬಿದ್ದು ನಗುವಂತೆ ಮಾಡುತ್ತದೆ.
ಹಾಗೆಯೇ ಮಾಯೋಲೋಕದ ಅನೇಕ ಪ್ರಸಂಗಗಳು ನಕ್ಕುನಗಿಸುವಂತೆ ಮಾಡುತ್ತದೆ. ತೇಜಸ್ವಿ ತಮ್ಮ ಎಂದಿನ ನವಿರಾದ ತೆಳು ಹಾಸ್ಯವನ್ನು ಮಾಯಾಲೋಕ ಕೃತಿಯಲ್ಲಿ ಮತ್ತಷ್ಟು ಪರಿಣಾಮಕಾರಿಯಾಗಿ ಬಳಸಿದ್ದಾರೆ.
ಮಾಯಾಲೋಕ 2006ರಲ್ಲಿ ಪ್ರಕಟವಾದ ತೇಜಸ್ವಿಯವರ ಕೊನೆಯ ಕಾದಂಬರಿ. ಮಾಯಾಲೋಕ ಹಲವು ಮರುಮುದ್ರಣಗಳನ್ನು ಕಂಡಿದೆ. ಮಾಯಾಲೋಕ ಪುಸ್ತಕ ಲ್ಯಾಂಡ್‍ಸ್ಕೇಪ್ ಅಳತೆಯಲ್ಲಿ ಅಡ್ಡಡ್ಡವಾಗಿ ಮುದ್ರಣವಾಗಿದೆ. ಪುಸ್ತಕದ ರಕ್ಷಾಪುಟದ ವಿನ್ಯಾಸವೇ ಪುಸ್ತಕದೊಳಗಿನ ಕಥನದ ಮುನ್ಸೂಚನೆ ನೀಡುವಂತಿದೆ. ನೈಜ ಚಿತ್ರಗಳನ್ನು ಬಳಸಿ ಪುಸ್ತಕದ ರಕ್ಷಾಪುಟವನ್ನು ವಿನ್ಯಾಸ ಮಾಡಲಾಗಿದೆ. ಮುಖಪುಟದಲ್ಲಿ ಒಂದು ಗೂಡ್ಸ್ ಆಟೋದಲ್ಲಿ ಪ್ರಾಣಿಗಳನ್ನು ಹಿಡಿಯುವ ಬಲೆ ಹಗ್ಗ, ಈಟಿ ಭರ್ಜಿಗಳ ಜೊತೆಗೆ ತಮ್ಮ ನಾಯಿಗಳನ್ನು ಹೇರಿಕೊಂಡು ತಲೆಗೆ ಟವಲ್ ಸುತ್ತಿದ್ದ ನಾಲ್ಕಾರು ಲುಂಗಿದಾರಿ ಪುರುಷರು ಸವಾರಿ ಮಾಡುತ್ತಿದ್ದರೆ ಮತ್ತೊಂದು ಚಿತ್ರ ಬಣ್ಣಬಣ್ಣದ ಉಡುಗೆಗಳನ್ನು ತೊಟ್ಟ ಆರು ಜನ ಪುಟ್ಟ ಬಾಲಕೀಯರು ಯಾರದೋ ಅನಿರೀಕ್ಷಿತ ಕರೆಗೆ ಕುತೂಹಲದಿಂದ ಹಿಂತಿರುಗಿ ನೋಡುವಂತಹ ಚಿತ್ರವಿದೆ. ಹಿಂದಿನ ರಕ್ಷಾಪುಟದಲ್ಲಿ ಮೂಡಿಗೆರೆ ಜನತೆಗೆ ಪರಿಚಿತ ಮುಖಗಳಾದ ಇಬ್ಬರು ಚಿಂದಿ ಆಯುವ ಮಹಿಳೆಯರು ಬಹುಶಃ ತಾಯಿ ಮಗಳು ತಮ್ಮ ಸರಂಜಾಮು ಸಹಿತ ಮಾತನಾಡುತ್ತಾ ನಿಂತಿದ್ದಾರೆ. ಹಾಗೂ ಮತ್ತೊಂದು ಚಿತ್ರದಲ್ಲಿ ಏಳೆಂಟು ಮಂದಿ ಪುರುಷರು ಮಹಿಳೆಯರು ಗಂಪಿನಲ್ಲಿ ನಿಂತು ಮಾತನಾಡುತ್ತಿದ್ದಾರೆ.
ಮಾಯಾಲೋಕ ಪುಸ್ತಕದ ಒಳಪುಟಗಳಲ್ಲಿಯೂ ನಾನಾರೀತಿಯ ಚಿತ್ರಗಳನ್ನು ಮುದ್ರಿಸಲಾಗಿದೆ. ಅಲ್ಲಿರುವ ವಿಷಯಕ್ಕೂ ಚಿತ್ರಕ್ಕೂ ಒಂದಕ್ಕೊಂದು ಸಂಬಂಧ ಇಲ್ಲದಂತೆ ಕಂಡರೂ ಅವೆಲ್ಲವೂ ನಮ್ಮ ಸುತ್ತಮುತ್ತಲಿನ ನಿತ್ಯದ ಬದುಕಿನಲ್ಲಿ ನಾವು ಕಾಣುವ ಚಿತ್ರಗಳೇ ಆಗಿವೆ. ಇದರಲ್ಲಿರುವ ಬರೀ ಚಿತ್ರಗಳನ್ನೇ ನೋಡುತ್ತಾ ಹೋದರೆ ನಮ್ಮ ಮನಸ್ಸಿನಲ್ಲಿಯೇ ಒಂದು ಮಾಯಾಲೋಕ ಸೃಷ್ಟಿಯಾಗುತ್ತಾ ಹೋಗುತ್ತದೆ. 246 ಪುಟಗಳ ಈ ಕೃತಿಗೆ ಮಾಯಾಲೋಕ ಒಂದು ಎಂದು ಹೆಸರಿಟ್ಟಿರುವುದನ್ನು ನೋಡಿದರೆ ತೇಜಸ್ವಿಯವರು ಇಂತಹ ಮಾಯಾಲೋಕದ ಸರಣಿಗಳನ್ನೇ ಓದುಗರಿಗೆ ಉಣಬಡಿಸಬೇಕೆಂಬ ಹಂಬಲ ಮತ್ತು ವಸ್ತು ವಿಷಯವನ್ನು ತಮ್ಮ ಮನಸ್ಸಿನಲ್ಲಿ ಹೊಂದಿದ್ದರು ಎಂಬುದು ಅರಿವಾಗುತ್ತದೆ. ನಮ್ಮೆಲ್ಲರ ದುರಾದೃಷ್ಟ ಮಾಯಾಲೋಕ-1 ಬಿಡುಗಡೆಯಾದ ಮರುವರ್ಷವೇ ಅವರು ನಮ್ಮನ್ನು ಅಗಲಿದರು.
ಅವರ ಕರ್ವಾಲೋ, ಚಿದಂಬರ ರಹಸ್ಯ, ಅಬಚೂರಿನ ಪೋಸ್ಟಾಪೀಸು, ಜುಗಾರಿ ಕ್ರಾಸ್, ಪರಿಸರದ ಕತೆ ಮುಂತಾದವುಗಳಲ್ಲಿ ತೇಜಸ್ವಿ ಪರೋಕ್ಷವಾಗಿ ಕೃತಿಯಲ್ಲಿ ನಿರೂಪಕನಾಗಿ ಕಾಣಿಸಿಕೊಂಡಿದ್ದಾರೆ. ಆದರೆ ಮಾಯಾಲೋಕದಲ್ಲಿ ನಿರೂಪಕನ ಜೊತೆಜೊತೆಗೆ ಸ್ವತಃ ಅವರೇ ನೇರವಾಗಿ ಪಾತ್ರದಾರಿಯಾಗಿರುವುದು ವಿಶೇಷ.
ತೇಜಸ್ವಿಯವರ ಬಹುತೇಕ ಕೃತಿಗಳಂತೆ ಮಾಯಾಲೋಕಕ್ಕೆ ಮುನ್ನುಡಿ ಹಿನ್ನುಡಿಯ ಮುಮ್ಮೇಳ ಹಿಮ್ಮೇಳಗಳಿಲ್ಲ. ತೇಜಸ್ವಿಯರು ಎರಡೇ ಪ್ಯಾರದಲ್ಲಿ ತಮ್ಮ ಲೇಖಕರ ನುಡಿಯಲ್ಲಿ ಕೃತಿಯ ಪ್ರವೇಶಕ್ಕೆ ಸಜ್ಜುಗೊಳಿಸುತ್ತಾರೆ. ಅವರು ತಮ್ಮ ನುಡಿಗಳಲ್ಲಿ ಬರೆದಿರುವಂತೆ “ನಾಲ್ಕು ದಶಕದ ಹಿಂದೆ ಅಬಚೂರಿನ ಪೋಸ್ಟಾಪೀಸು ಕಥಾಸಂಕಲನಕ್ಕೆ ಮೊದಲ ಮಾತುಗಳನ್ನು ಬರೆಯುತ್ತಾ ಬದಲಾಗುತ್ತಿರುವ ಸನ್ನಿವೇಶಗಳ ಸವಾಲುಗಳನ್ನು ಎದುರಿಸಲು ನಾವು ಹೊಸದಿಗಂತಗಳತ್ತ ಹೋಗಬೇಕಾಗಿರುವುದನ್ನು ಜ್ಞಾಪಿಸಿದ್ದೆ. ಈಗ, ಇಪ್ಪತ್ತೊಂದನೇ ಶತಮಾನ ಪ್ರಾರಂಭವಾಗುತ್ತಿದ್ದಂತೆ ಅಂಥದೇ ಪರಿಸ್ಥಿತಿಯಲ್ಲಿ ಮತ್ತೊಮ್ಮೆ ನಿಂತಿದ್ದೇವೆಂದು ಅನ್ನಿಸುತ್ತಿದೆ. ನಮ್ಮೆದುರು ಬದಲಾವಣೆಗಳ ಮಹಾಪೂರವೇ ಹರಿಯುತ್ತಿದೆ. ಹೊಸ ನುಡಿಗಟ್ಟುಗಳು, ಹೊಸ ಉಕ್ತಿಭಂಗಿ, ಹೊಸ ಅಭಿವ್ಯಕ್ತಿ ವಿಧಾನಗಳ ಬಗ್ಗೆ ನಾವೀಗ ಗಮನ ಹರಿಸಿ ಹೊಸದಿಗಂತಗಳತ್ತ ಅನ್ವೇಷಣೆ ಹೊರಡಬೇಕಾಗಿದೆ.
ಈ ಕೃತಿಯಲ್ಲಿ ಹಾಸುಹೊಕ್ಕಾಗಿರುವ ಸ್ಕೆಚ್ ಮತ್ತು ರೇಖಾ ಚಿತ್ರಗಳು ಕೃತಿಯ ಸಾಂದರ್ಭಿಕ ವಿವರಣೆಯಾಗಿ ಕೊಟ್ಟಿರುವ ಚಿತ್ರಗಳಲ್ಲ. ಹಾಗೆ ಕಂಡುಬಂದರೂ ಅದು ಕೇವಲ ಆಕಸ್ಮಿಕವಷ್ಟೇ ಹೊರತು ಉದ್ದೇಶಪೂರ್ವಕವಲ್ಲ. ಇದೊಂದು ಕೊಲಾಜ್ ಮಾದರಿಯ ಕಲಾಕೃತಿ. ಇಲ್ಲಿ ಕಥಾ ಪ್ರತಿಮೆಗಳೂ, ದೃಶ್ಯಪ್ರತಿಮೆಗಳೂ ಓದುತ್ತ ಹೋದಂತೆ ಒಂದರಮೇಲೊಂದು ಸಂಯೋಜನೆಗೊಳ್ಳುತ್ತಾ ಮಾಯಾಲೋಕವನ್ನು ಸೃಷ್ಟಿಸುತ್ತವೆ. ಇದೊಂದು ಬೆಟ್ಟು ತೋರಿಸಿ ನಿರ್ದೇಶಿಸಲಾರದಷ್ಟು ಸೂಕ್ಷ್ಮ ಮತ್ತು ಪರೋಕ್ಷ ಸಂವಹನ ಕ್ರಿಯೆಯಾದುದರಿಂದ ನಾನು ಇದಕ್ಕಿಂತ ಹೆಚ್ಚಿನ ವಿವರಣೆ ಕೊಡಲಾರೆ” ಎಂದು ತೇಜಸ್ವಿಯವರೇ ಹೇಳಿಕೊಂಡಿದಾರೆ.
ಮಾಯಾಲೋಕ ಕೃತಿಯನ್ನು ಬಹುತೇಕರು ಓದಿರಬಹುದು, ಅದರಲ್ಲಿ ಬರುವ ಮೂರು ಮುಖ್ಯ ಸ್ಥಳಗಳ ಹೆಸರು ಗೊಂದಲಗೇರಿ, ಊರಳ್ಳಿ ಮತ್ತು ಮಕ್ಕಿಗದ್ದೆ. ಗೊಂದಲಗೇರಿ ಎಂದರೆ ಅದು ಮೂಡಿಗೆರೆ ಎಂಬುದರಲ್ಲಿ ಯಾವುದೇ ಅನುಮಾನ ಇಲ್ಲ. ಇನ್ನು ಊರಳ್ಳಿ ಮತ್ತು ಮಕ್ಕಿಗದ್ದೆ ತೇಜಸ್ವಿಯವರ ತೋಟದ ಸಮೀಪ ಬರುವ ಯಾವುದೋ ಎರಡು ಪುಟ್ಟ ಹಳ್ಳಿಗಳು. ಆ ಹಳ್ಳಿಗಳು ಯಾವು ಎಂದು ನನಗೆ ಗೊತ್ತು ಆದರೆ ಈ ಸಾರಾಯಿ ಕಾಯ್ಸೋ ವಿಚಾರ ಇರೋದ್ರಿಂದ್ರ ಇದನ್ನ ಇಲ್ಲಿ ಹೇಳಿದ್ರೆ ಕಾದಂಬರಿಯ ಪಾತ್ರಗಳು ನಾಳೆ ನನ್ನ ಹುಡುಕಿಕೊಂಡು ಬರಬಹಯದು, ಬಿರಿಯಾನಿ ಕರಿಯಪ್ಪ ಮತ್ತು ಯಂಗ್ಟ ಬಂದ ಹಾಗೆ
ಮಾಯಾಲೋಕದಲ್ಲಿ ಬರುವ ಪಾತ್ರಗಳೆಲ್ಲಾ ಜನಸಾಮಾನ್ಯರದೇ ಆಗಿವೆ. ಅವರ ಕರ್ವಾಲೋ, ಚಿದಂಬರ ರಹಸ್ಯ ಮುಂತಾದ ಕೃತಿಗಳಲ್ಲಿ ಬರುವಂತೆ ಮಾಯಲೋಕದಲ್ಲಿ ವಿಜ್ಞಾನಿಗಳು, ಸಂಶೋಧಕರು, ಪ್ರಾಧ್ಯಾಪಕರು ಮುಂತಾದ ಯಾವ ವೈಟ್ ಕಾಲರ್‍ನ ಯಾವ ಪಾತ್ರಗಳು ಇಲ್ಲ. ಹಳ್ಳಿಗಾಡಿನಲ್ಲಿ ವಿವಿಧ ವೃತ್ತಿಗಳನ್ನು ಮಾಡುವ ಎಲ್ಲಾ ಜನಾಂಗದ ಎಲ್ಲಾ ಸ್ತರದ ಜನಗಳು ಇಲ್ಲಿ ಪಾತ್ರದಾರಿಗಳಾಗಿದ್ದಾರೆ.
ಬಹುಮುಖ್ಯವಾಗಿ ಕಾದಂಬರಿಯ ನಿರೂಪಕನ ಪಾತ್ರದಲ್ಲಿ ಸ್ವತಃ ತೇಜಸ್ವಿಯವರು ಕಾಣಿಸಿಕೊಂಡಿದ್ದಾರೆ. ಊರಳ್ಳಿಯ ಕೃಷಿಕ ಅಣ್ಣಪ್ಪಣ್ಣ, ಕ್ಷೌರಿಕ ವೃತ್ತಿಯ ಬಾಬು, ಸಕಲ ಕಲಾ ವಲ್ಲಭ ಕರಾಟೆ ಮಂಜ, ಜಗದೀಶ ಆಲಿಯಾಸ್ ಜಗ್ಗು, ಸೂರಿ, ಅಣ್ಣಪ್ಪಣ್ಣನ ಹೆಂಡತಿ ರುಕ್ಮಿಣಿ, ಬಾಬು ಹೆಂಡತಿ ಗಂಗೆ, ಕರಾಟೆ ಮಂಜನ ಅಮ್ಮ ಈರಿ. ಮಕ್ಕಿಗದ್ದೆಯ ಕಮ್ಮಾರ ಕಂ ವಾಟರ್‍ಮೆನ್ ಇಕ್ಬಾಲ್ ಸಾಬಿ, ಕುಮರಿ ಶೆಟ್ಟಿ, ಬಾಳೂರು ಬಸಣ್ಣ, ಸೈಕಲ್ ಶಾಫ್ ಜಾನ್ ಬೆಟ್ಟಯ್ಯ, ರೈತಸಂಘದ ಮೀಸೆ ಉಗ್ರಪ್ಪ, ಲಕ್ಷ್ಮಣ, ಪ್ರಕಾಶವಾಣಿ ಪತ್ರಿಕೆ ಸಂಪಾದಕ ಪ್ರಕಾಶ, ಕೆ.ಇ.ಬಿ. ಜೂನಿಯರ್ ಇಂಜಿನಿಯರ್ ಮಲ್ಲಿಕಾರ್ಜುನ, ಲೈನ್‍ಮ್ಯಾನ್ ಆರ್ಮುಗಂ. ಕೆ.ಇ.ಬಿ.ಸ್ಟೋರ್ ಕೀಪರ್ ರಾಮಯ್ಯ. ಎಂ.ಎಲ್.ಎ. ಮಾರಪ್ಪ, ತರಕಾರಿ ವ್ಯಾಪಾರಿ ಜಲೀಲ್ ಸಾಬ್, ಬಜ್ಜಿ ಮಾಡುವ ಫಾತೀಮಾ, ಮುನ್ಸಿಪಾಲಿಟಿ ಅಧ್ಯಕ್ಷ ಚಿಕ್ವೀರು ಮತ್ತು ಆತನ ರೌಡಿ ಗ್ಯಾಂಗ್, ಮಣ್ಣುಕೆಲಸ ಮಾಡುವ ತಿಮ್ಮಾಬೋವಿ ಮತ್ತವನ ಹೆಂಡತಿ, ಜೂಲನಾಯ್ಕನ ಹೆಂಡತಿ ಯಾಡಿ, ಕುಡುಕ ಸುಬ್ಬ…..ಹೀಗೆ ಈ ಕೃತಿಯಲ್ಲಿ ತೇಜಸ್ವಿಯವರು ಸೃಷ್ಟಿಸಿರುವ ಪಾತ್ರಗಳೆಲ್ಲಾ ಸಮಾಜದ ಸಾಮಾನ್ಯರಲ್ಲಿ ಸಾಮಾನ್ಯ ಜನರೇ ಹೆಚ್ಚಾಗಿದ್ದಾರೆ.
ಮಾಯಾಲೋಕ ಕೃತಿಯ ಹಿನ್ನಲೆಯಲ್ಲಿ ಬೀಕರ ಬರಗಾಲದ ಛಾಯೆ ಆವರಿಸಿಕೊಂಡಿದೆ. ಇಲ್ಲಿ ಬರುವ ಬಹುತೇಕ ಪ್ರಸಂಗಗಳು ಬರಗಾಲದ ಕಾರಣದಿಂದ ಉಂಟಾಗಿರುವ ನೀರಿನ ಕೊರತೆ, ವಿದ್ಯುತ್ ಅಭಾವದ ಕಾರಣದಿಂದ ರೂಪುಗೊಂಡಿರುವಂತಹವು. ಪ್ರಾಕೃತಿಕ ಋತುಮಾನಗಳಲ್ಲಿ ಉಂಟಾಗುವ ವ್ಯತ್ಯಯ ನಾಗರೀಕ ಸಮಾಜದ ಮೇಲೆ, ಜೀವಚರಗಳ ಮೇಲೆ ಉಂಟುಮಾಡುವ ತಲ್ಲಣಗಳನ್ನು ತೇಜಸ್ವಿಯವರು ಈ ಕೃತಿಯ ಮೂಲಕ ಕಟ್ಟಿಕೊಟ್ಟಿದ್ದಾರೆ.
ಕೇವಲ ನಾಲ್ಕೈದು ತಿಂಗಳಲ್ಲಿ ಗೊಂದಲಗೇರಿ ಮತ್ತು ಸುತ್ತಮುತ್ತ ನಡೆಯುವ ಘಟನಾವಳಿಗಳೆ ಮಾಯಾಲೋಕದ ವಸ್ತುವಿಷಯಗಳು. ಇಷ್ಟು ಕಡಿಮೆ ಅವಧಿಯಲ್ಲಿ ಇಷ್ಟು ಚಿಕ್ಕ ಪ್ರದೇಶದಲ್ಲಿ ಒಂದು ಕಾದಂಬರಿಗಾಗುವಷ್ಟು ಕಥಾನಕಗಳು ಸೃಷ್ಟಿಯಾಗುತ್ತವೆ ಎಂದರೆ ಜಗತ್ತು ಮೇಲ್ನೋಟಕ್ಕೆ ನಿಶ್ಚಲವಾಗಿದೆ ಎನಿಸಿದರು ಒಳಗಿಂದೊಳಗೆ ಎಷ್ಟೊಂದು ಚಲನಶೀಲವಾಗಿದೆ ಎಂಬುದನ್ನು ಕೃತಿಯು ನಿರೂಪಿಸುತ್ತದೆ.
ಇನ್ನು ಮಾಯಾಲೋಕ ಕೃತಿಯ ಒಳಗಿನ ಕಥನಗಳನ್ನು ಕೆಲವೊಂದನ್ನು ನೋಡುವುದಾದರೆ
ಕಾದಂಬರಿಯ ಆರಂಭದಲ್ಲಿಯೇ ತೇಜಸ್ವಿಯವರ ಮುದ್ದಿನ ನಾಯಿ ಮರಿಯ ಪ್ರಸಂಗದಿಂದ ಆರಂಭವಾಗುತ್ತದೆ.
…………………………..
* ಸತತ ಮೂರು ವರ್ಷದಿಂದ ಬರಗಾಲ ಆವರಿಸಿದ್ದರಿಂದ ಎಲ್ಲೆಲ್ಲೂ ನೀರಿಗಾಗಿ ಜಗಳ ಬಡಿದಾಟಗಳು ನಡೆದಿರುತ್ತವೆ. ಹೇಮಾವತಿ ನದಿಯಿಂದ ಕಾಫಿ ತೋಟಗಳಿಗೆ ನೀರು ಹಾಯಿಸುತ್ತಿದ್ದ ಪ್ಲಾಂಟರ್‍ಗಳ ಮೋಟರ್‍ಗಳನ್ನು ತಹಸೀಲ್ದಾರ್ ಕಛೇರಿಯವರು ಜಪ್ತಿ ಮಾಡಲು ಪ್ರಾರಂಭಿಸುತ್ತಾರೆ. ಇದು ದೊಡ್ಡ ಜಟಾಪಟಿಗೂ ಕಾರಣವಾಗಿರುತ್ತದೆ.
ಊರಳ್ಳಿ ಮತ್ತು ಮಕ್ಕಿಗದ್ದೆ ಊರವರ ನಡುವೆ ಯಾವಾಗಲೂ ನೀರಿಗಾಗಿ ಜಗಳ ನಡೆಯುತ್ತಾ ಇರುತ್ತದೆ. ಜೊತೆಗೆ ಬಟ್ಟಿ ಸಾರಾಯಿ ವಿಚಾರದಲ್ಲಿಯೂ ಎರಡು ಹಳ್ಳಿಯವರಿಗೆ ಜಟಾಪಟಿ ನಡೆಯುತ್ತಿರುತ್ತದೆ. ಮಕ್ಕಿಗದ್ದೆಗೆ ಒಳ್ಳೆ ರಸ್ತೆ ಸೌಕರ್ಯ ಇದ್ದುದ್ದರಿಂದ ಅಲ್ಲಿಗೆ ಎಕ್ಸೈಸ್ ಸ್ಕ್ವಾಡ್ ನವರು ಪದೇ ಪದೇ ರೈಡ್ ಮಾಡುತ್ತಿದ್ದರು. ಆದರೆ ಊರಳ್ಳಿಗೆ ರಸ್ತೆ ಸಂಪರ್ಕ ಕಷ್ಟವಾಗಿದ್ದರಿಂದ ಅಲ್ಲಿಗೆ ಅಷ್ಟು ಸುಲಭವಾಗಿ ಸ್ಕ್ವಾಡ್‍ನವರು ರೈಡ್ ಮಾಡಲು ಸಾಧ್ಯವಿರಲಿಲ್ಲ. ಮಕ್ಕಿಗದ್ದೆಯವರಿಗೆ ಒಳ್ಳೆ ರಸ್ತೆ ನೀರಿನ ವ್ಯವಸ್ಥೆ ಇದೆ ಎಂದು ಊರಳ್ಳಿಯವರು, ಊರಳ್ಳಿಯವರು ಸಾರಾಯಿ ಮಾರಿ ಚೆನ್ನಾಗಿ ದುಡ್ಡು ಮಾಡುತ್ತಿದ್ದಾರೆ ಎಂದು ಮಕ್ಕಿಗದ್ದೆಯವರು ಪರಸ್ಪರರ ಮೇಲೆ ಅಸೂಯೆ ಪಡುತ್ತಿರುತ್ತಾರೆ.
ಊರಳ್ಳಿ ಮೂಲಕ ಮಕ್ಕಿಗದ್ದೆ ಕಡೆದ ಹರಿಯುವ ನೀರಿನ ತೊರೆಗೆ ಮೀನು ಹಿಡಿಯುವ ಉದ್ದೇಶದಿಂದ ಯಾರೋ ಕಾರೇಕಾಯಿ ಕದಡಿದ್ದರಿಂದ ಹಳ್ಳದಲ್ಲಿದ್ದ ಮೀನೆಲ್ಲ ಸತ್ತು ತೇಲಾಡುತ್ತಿರುತ್ತವೆ. ಕಾರೇಕಾಯಿ ವಿಷ ಮತ್ತು ಸತ್ತಮೀನಿನ ವಾಸನೆ ಮಕ್ಕಿಗದ್ದೆಯವರ ಕುಡಿಯುವ ನೀರಿನ್ನು ಕುಲುಷಿತಗೊಳಿಸಿರುತ್ತದೆ. ಇದು ಮಕ್ಕಿಗದ್ದೆ ವಾಟರ್‍ಮನ್ ಇಕ್ಬಾಲ್ ಸಾಬಿ ಮತ್ತು ಆ ಊರಿನ ಜನರನ್ನು ರೊಚ್ಚಿಗೇಳುವಂತೆ ಮಾಡುತ್ತದೆ. ಜೊತೆಗೆ ಮಕ್ಕಿಗದ್ದೆಯವರಿಗೆ ಹೇಳದೇ ಊರಳ್ಳಿಯವರೇ ಕದ್ದು ಮೀನು ಹಿಡಿದಿದ್ದಾರೆ ಎಂಬ ಪುಕಾರು ತೆಗೆದು ಮಕ್ಕಿಗದ್ದೆಯವರು ಊರಳ್ಳಿಯವರ ಮೇಲೆ ಜಗಳಕ್ಕೆ ಬರುತ್ತಾರೆ.
ಎರಡೂ ಊರಿನವರು ಊರಳ್ಳಿ ಸರ್ಕಲ್‍ನಲ್ಲಿ ನಿಂತು ಬಿರುಸಿನಿಂದ ವಾಗ್ವಾದ ಮಾಡುತ್ತಿರುವಾಗ ದೇವರುಂದ ಕಡೆಯಿಂದ ದೂಳೆಬ್ಬಿಸುತ್ತಾ ಬಂದ ಖಾಸಗಿ ಬಸ್‍ನಿಂದ ಕುಡುಕ ಸುಬ್ಬ ಮತ್ತು ತನ್ನ ಲೈಂಗಿಕ ಸಾಹಸಗಳಿಗೆ ಕುಖ್ಯಾತಳಾಗಿದ್ದ ಜೂಲನಾಯ್ಕನ ಹೆಂಡತಿ ಯಾಡಿ ಒಟ್ಟಿಗೆ ಇಳಿದಿದ್ದು ನೋಡಿ ಸೇರಿದ್ದ ಜನ ಗುಸುಗುಸು ಮಾತನಾಡುತ್ತಾರೆ. ಇವರ ಜಗಳದ ಮಧ್ಯೆ ಬಾಯಿ ಹಾಕಿದ ಕುಡುಕ ಸುಬ್ಬ ಊರಳ್ಳಿಯವರ ಪರವಹಿಸಿ ಮಕ್ಕಿಗದ್ದೆಯವರಿಗೆ ನಿಮ್ಮತ್ರ ಇದೇ ಇಲ್ಲ ಎಂದದ್ದು ಇಡೀ ಘಟನೆಗೆ ತಿರುವು ನೀಡುತ್ತದೆ. ಕುಡುಕ ಸುಬ್ಬನ ಮಾತಿನಿಂದ ಕುಪಿತನಾದ ಮಕ್ಕಿಗದ್ದೆ ಶಿವೇಗೌಡ ಇದೇ ಇಲ್ಲ ಎಂದರೆ ಏನೋ ಅರ್ಥ ಎಂದು ಸುಬ್ಬನನ್ನು ಜೋರಾಗಿ ತಳ್ಳುತ್ತಾನೆ. ಮೊದಲೇ ತೂರಾಡುತ್ತಿದ್ದ ಸುಬ್ಬ ಹಿಂದೆ ನಿಂತು ತಮಾಷೆ ನೋಡುತ್ತಿದ್ದ ಲಂಬಾಣಿ ಹೆಂಗಸು ಯಾಡಿ ಮೇಲೆ ವಾಲಿ ಇಬ್ಬರು ದೊಪ್ಪನೆ ನೆಲಕ್ಕೆ ಬೀಳುತ್ತಾರೆ ಇದರಿಂದ ಕೋಪಗೊಂಡ ಯಾಡಿ ಅಲ್ಲಿದ್ದವರಿಗೆಲ್ಲಾ ನಿರಂತರವಾಗಿ ಸೊಂಟದ ಕೆಳಗಿನ ಭಾಷೆಯಲ್ಲಿ ಜಾಡಿಸುತ್ತಾಳೆ. ಅವಳ ಬೈಗುಳದ ಉರಿ ತಡೆಯಲಾರದೇ ಒಬ್ಬೊಬ್ಬರೇ ಜಾಗ ಖಾಲಿ ಮಾಡುತ್ತಾರೆ. ಇಲ್ಲಿದೆ ಇವರ ಮೀನಿನ ಜಗಳ ಸಮಾಪ್ತಿಯಾಗುತ್ತದೆ.
ಹೀಗೆ ತೇಜಸ್ವಿಯವರು ಇಲ್ಲಿನ ಎಲ್ಲಾ ಘಟನಾವಳಿಗಳಿಗೂ ಯಾರೂ ನಿರೀಕ್ಷಿಸದೇ ಇದ್ದ ವಿಚಿತ್ರ ತಿರುವು ನೀಡಿ ಓದುಗರನ್ನು ಬೆರಗಾಗಿಸುತ್ತಾರೆ.
ತಿಮ್ಮಾ ಬೋವಿ, ಆತನ ಹೆಂಡತಿ, ಓ.ಎಫ್.ಸಿ. ಚರಂಡಿ ತೆಗೆಯುವಾಗ ಮಡಿಕೆಯಲ್ಲಿ ಬೂದಿ, ಹಂಚಿನ ಚೂರು, ಮಡಿಕೆಯ ಎಸೆದು ಹೋಗಿದ್ದರು. ಅದು ಕುಂಟ್ರಾಮನಿಗೆ ಸಿಕ್ಕಿ ತಿಮ್ಮಾ ಬೋವಿಗೆ ಚಿನ್ನ ಸಿಕ್ಕಿದೆ ಎಂಬ ಪುಕಾರು ಹಬ್ಬಿಸುವುದು,
ತರಕಾರಿ ತರಲು ಗೊಂದಲಗೇರಿಗೆ ಬಂದ ತೇಜಸ್ವಿಯವರಿಗೆ ಆಗುವ ನಾನಾ ತರದ ಅನುಭವಗಳು
ತರಕಾರಿ ಅಂಗಡಿ ಜಲೀಲ್ ಸಾಬ್, ಮಗ ಹಮೀದ್, ಬಜ್ಜಿ ಅಂಗಡಿ ಪಾತೀಮಾ ನಡುವ ಗಲಾಟೆ ಮೆಣಸಿನ ಕಾಯಿ ಕಾರ ಇದೆ ಎಂದು. ಹಮೀದ ತಿಂದು ನೋಡಿ ಕಾರಾ. ನಂತರ ಪಾತೀಮಾನೇ ದುಡ್ಡುಕೊಟ್ಟು ಪಚ್ಚಬಾಳೆ ಹಣ್ಣ್ಣು ತಿನ್ನಲು ಕೊಡಿಸಿದ ಪ್ರಸಂಗ,
ಮೀನು ಅಂಗಡಿ ಹತ್ತಿರ ಬಂದಾಗ ಪ್ರಕಾಶವಾಣಿ ಪತ್ರಿಕೆ ಪ್ರಕಾಶ. ಮೀನು ಮಾರಾಟ ಮಾಡುವ ಅಬ್ದುಲ್ ಕಾಕನ ಬಳಿ ಗಲಾಟೆ. ಮೀನು ತಿಂದು ವಾಂತಿಬೇದಿ ಆಗಿದೆ. ಚರಂಡಿ ಪಕ್ಕದಲ್ಲಿ ಮೀನು ಮಾರಾಟ ಕಾರಣ. ಅಲ್ಲಿಗೆ ನಿರೂಪಕ ಆಗಮನ ಅವರಿಗೆ ಪ್ರಕಾಶ ರಾಜಕೀಯಕ್ಕೆ ಬರಬೇಕು ಎಂಬ ಸಲಹೆ ಅವರ ನಿರ್ಗಮನದ ನಂತರ ಅಬ್ದುಲ್ ಕಾಕ ಪ್ರಕಾಶನ ಬಗ್ಗೆ ದೂರು, ಸುರೇಶ್ ಗೌಡ್ರು ಹೊಡೆದದ್ದು.
‘ಏ ವನ್ ಚಿಕ್ಕನ್ ಸ್ಟಾಲ್’ ನ ಸತ್ತಾರ್ ಅಂಗಡಿ ಬಳಿ ಬಂದಾಗ, ಬಾತುಕೋಳಿಯ ಮರಿಗಳು. ಅದರ ತಾಯಿ ಮೈಕೆಲ್ ಪೆರೇರಾ ಅರ್ಜೆಂಟಾಗಿ ಬಾತಿನ ಮಾಂಸ ಬೇಕಾಗಿದ್ದರಿಂದ ತಾಯಿಯನ್ನು ಕೊಯ್ದು. ಬಾತಿನ ಮರಿಗಳ ಕರುಣಾಜನಕ ಸ್ಥಿತಿಯನ್ನು ನೋಡಿ ತೇಜಸ್ವಿಯವರಿಗೆ ಮಾಂಸವನ್ನು ಕೊಳ್ಳುವ ಬಯಕೆಯೇ ಇಲ್ಲವಾಗುತ್ತದೆ. ಯಾವುದು ಬೇಡ ಎಂದು ಮನೆಯ ಕಡೆ ಹೊರಟವರು ಸ್ವಲ್ಪ ದೂರ ನೋದ ನಂತರ ಬಾತಿನ ಮರಿಗಳನ್ನು ಕೆರೆಯಲ್ಲಿ ಸಾಕಲು ತರುವುದು, ರೈಟರ ಕೋಳಿ ಹೇಟೆ ಜೊತೆ ಬಿಡುವುದು, ನೀರು ನೋಡಿದ ತಕ್ಷಣ ನೀರಿನಲ್ಲಿ ಈಜುತ್ತಾ ಸಾಗಿತ್ತು. ಅದನ್ನ ತೇಜಸ್ವಿಯವರು ಮೌನವಾಗಿ ನೋಡುತ್ತಾ ನಿಲ್ಲುತ್ತಾರೆ. ಬಹುಶಃ ಕರ್ವಾಲೋ ಕೃತಿಯ ಕೊನೆಯಲ್ಲಿ ಹಾರುವ ಓತಿ ಬೆಟ್ಟದಿಂದ ನಗೆದು ಪ್ರಪಾತದಲ್ಲಿ ರಕ್ಕೆಬಿಟ್ಟಿ ಹಾರುತ್ತಾ ಹೋದಂತಹ ಅನುಭವವೇ ಇಲ್ಲಯೂ ಅವರಿಗೆ ಆಗುತ್ತದೆ. ಸತ್ತಾರ್‍ನ ಚಿಕನ್ ಅಂಗಡಿಯಲ್ಲಿ ಸಾಯುವ ಸ್ಥಿತಿಯಲ್ಲಿ ಇದ್ದ ಬಾತುಮರಿಗಳು ತೇಜಸ್ವಿ ಕೆರೆಯಲ್ಲಿ ಜೀವಕಳೆ ಪಡೆದು ಈಜುತ್ತಾ ಸಾಗಿದ್ದು ಜಗತ್ತಿನ ಮಾಯಾಲೋಕದ ಭಾಗವಾಗಿ ಅವರಿಗೆ ಕಾಣುತ್ತದೆ.
ಕರಾಟೆ ಮಂಜನ ಪಾತ್ರ ಬಹಳ ವಿಷೇಶವಾಗಿದೆ. ಊರಳ್ಳಿ ಕುಳುವಾಡಿ ಕರಿಯ ಮತ್ತು ಈರಿಯ ಮಗ. ದಲಿತ ಕುಟುಂಬದ ಮಂಜನನ್ನು ಓದಿಸಿ ಸರ್ಕಾರಿ ಕೆಲಸಕ್ಕೆ ಸೇರಿಸಬೇಕೆಂದು ಅವನ ತಾಯಿಯ ಬಯಕೆಯಾಗಿತ್ತು. ಆದರೆ ಸರ್ಕಾರಿ ಕೆಲಸದ ಬಗ್ಗೆ ಆಸಕ್ತಿ ಇಲ್ಲದ ಮಂಜ ಗೊಂದಲಗೇರಿ ಸ್ನಾಕ್ ಬಾರ್ ಎದುರು ಬೀಡ ಅಂಗಡಿ ಹಾಕಿಕೊಂಡಿದ್ದ. ಆಗ ಗೊಂದಲಗೇರಿಯಲ್ಲಿ ಸಬ್ ಇನ್ಸ್‍ಪೆಕ್ಟರ್ ಆಗಿದ್ದ ಧಾರವಾಡ ಕಡೆಯ ಗುದ್ಲಪ್ಪ ಎಂಬುವವರ ಪರಿಚಯವಾಗಿ ತಮ್ಮ ದಲಿತ ಪಂಗಡದವನಾದ ಮಂಜನನ್ನು ಪೊಲೀಸ್ ಇಲಾಖೆಗೆ ಸೇರಿಸುವ ಉದ್ದೇಶದಿಂದ ಅವನಿಗೆ ಕರಾಟೆ ಕಲಿಸಿಕೊಡುತ್ತಾರೆ. ಮಂಜನನ್ನು ಎಲ್ಲರು ಕರಾಟೆ ಮಂಜ ಎಂದು ಕರೆಯತೊಡಗುತ್ತಾರೆ. ಆದರೆ ಪೊಲೀಸ್ ಕೆಲಸಕ್ಕೆ ಸೇರಲು ಕೊಂಚವು ಇಷ್ಟವಿಲ್ಲದ ಮಂಜ ಊರುಬಿಟ್ಟು ಓಡಿಹೋದವನು ಗುದ್ಲಪ್ಪ ಗೊಂದಲಗೇರಿಯಿಂದ ವರ್ಗವಾದ ನಂತರವೇ ಹಿಂತಿರುಗಿದ್ದು. ಕರಾಟೆ ಮಂಜ ಮಾಯಾಲೋಕದ ನಿರೂಪಕ ತೇಜಸ್ವಿಯವರಿಗೆ ಆಪ್ತನಾಗಿ ಬಿಡುತ್ತಾನೆ.
ಒಮ್ಮೆ ಕಾಲೇಜು ಹುಡುಗಿಯರಿಗೆ ಜುಡಾಯಿಸುತ್ತಿದ್ದ ಮೂರುಜನ ಯುವಕರಿಗೆ ಕರಾಟೆ ಕರಾಮತ್ತು ತೋರಿಸಿದ ನಂತರ ಮಂಜನ ಖದರೇ ಬದಲಾಗುತ್ತದೆ. ಮಂಜ ತನ್ನ ಅಸಾಧಾರಣ ಬುದ್ದಿಮತ್ತೆ ಮತ್ತು ಪ್ರತಿಭೆಯಿಂದ ಎಲ್ಲರನ್ನು ಬೆರಗಾಗಿಸುತ್ತಾನೆ. ಬೀಡಾ ಅಂಗಡಿ ನಡೆಸುತ್ತಿದ್ದವನು ಅದನ್ನು ಬಿಟ್ಟು ಕೆಲ ಸಮಯ ಪಾನಿಪೂರಿ ಅಂಗಡಿ, ನಂತರ ಎಳನೀರು ವ್ಯಾಪಾರ, ಆಟೋ ಡ್ರೈವರ್, ಪಂಚರ್ ಅಂಗಡಿ ಅದನ್ನು ಬಿಟ್ಟು ತೋಟದಲ್ಲಿ ಮರಗಸಿ. ಪೋಟೋಗ್ರಾಪರ್, ಕೊನೆಗೆ ಪ್ರಕಾಶವಾಣಿ ಪತ್ರಿಕೆಯಲ್ಲಿ ಪ್ರೆಸ್ ರಿಪೋರ್ಟರ್ ಆಗುವ ವರೆಗೆ ಅವನು ಬೆಳೆದು ನಿಲ್ಲುತ್ತಾನೆ. ನಿರ್ಲಕ್ಷಕ್ಕೆ ಒಳಗಾಗಿದ್ದ ದಲಿತ ಕುಟುಂಬದ ಹಿನ್ನಲೆಯಿಂದ ಬಂದ ಪ್ರಕಾಶ ಅವಕಾಶಗಳನ್ನು ಬಳಸಿಕೊಂಡು ಯಾವುದೇ ಕೆಲಸದಲ್ಲಿಯು ಶ್ರದ್ದೆಯಿಂದ ತೊಡಗಿಸಿಕೊಂಡು ಹಂತಹಂತವಾಗಿ ಸಮಾಜದಲ್ಲಿ ಗುರುತಿಸಿಕೊಳ್ಳುತ್ತಾ ಕಾದಂಬರಿಯ ಉಳಿದೆಲ್ಲ ಪಾತ್ರಗಳಿಗಿಂತ ವಿಭಿನ್ನವಾಗಿ ಕಾಣುತ್ತಾನೆ. ಜೊತೆಗೆ ನಿರೂಪಕ ತೇಜಸ್ವಿಯವರು ಕರಾಟೆ ಮಂಜನನ್ನು ಬಹಳ ಆತ್ಮಿಯನಾಗಿಸಿಕೊಳ್ಳುತ್ತಾರೆ.
ಮೋಪೆಡ್ ಪ್ರಸಂಗ : ಮೀನು ಮಾರುವ ಅಬ್ಬೂಸ್‍ಬ್ಯಾರಿಗೆ ಊರಳ್ಳಿ ಜಗ್ಗ 400 ಸಾಲ ಕೊಟ್ಟಿರ್ತಾನೆ, ಸಾಲಕ್ಕೆ ಮೋಪೆಡ್ ಮತ್ತು ಆರು ಮೂಟೆ ಮೀನು ಗೊಬ್ಬರ ಮೀನು ಗೊಬ್ಬರ ಅಣ್ಣಪ್ಪಣ ವಹಿಸಿಕೊಂಡಿರುತ್ತಾನೆ. ಮೊಪೆಡ್ ಸೈಲೆನ್ಸರ್ ಹೋಗಿ ವಿಮಾನ ಹೆಲಿಕಾಪ್ಟರ್ ಶಬ್ದ ಬರುತ್ತಿರುತ್ತೆ. ಬೀದಿದನಗಳು ಮೊಪೆಡ್ ಮೇಲೆ ಎಗರಿ ಬರುತ್ತವೆ. ಜಗ್ಗನಿಗೆ ಮೊಪೆಡ್ ಕಲಿಸಲು ಹೋಗಿ ಮರಕ್ಕೆ ಡಿಕ್ಕಿ ಹೊಡೆದು ಮಂಜ ಜಲ್ಲಿಕಲ್ಲು ಮೇಲೆ, ಜಗ್ಗ ಲಂಟಾನದ ಮೇಲೆ ಬಿದ್ದು ಚಾಸಿ ಬೆಂಡಾಗಿರುತ್ತದೆ.
ಮೀನು ಗೊಬ್ಬರ ಮತ್ತು ಬಾಯಮ್ಮನ ಹಂದಿ ಪ್ರಸಂಗ : ಪ್ರಸಂಗ : ಮೆಣಸಿನ ಗಿಡಕ್ಕೆ ಮೀನು ಗೊಬ್ಬರವನ್ನು ಹಾಕಿದ್ದಕ್ಕೆ ಕಾಡು ಹಂದಿಗಳು ಮುತ್ತಿಗೆ, ಹಂದಿ ಶಿಕಾರಿಗೆ ಹೋದಾಗ ಹಂದಿಯೊಂದನ್ನು ಹೊಡೆದಿದ್ದರು. ಅದೇ ಸಮಯಕ್ಕೆ ಬಾಯಮ್ಮನ ಸಾಕಿದ ಹಂದಿಹೊಂದು ತಪ್ಪಿಸಿಕೊಂಡಿರುತ್ತೇ. ಗಾಯಗೊಂಡುಉ ಬಿದ್ದಿದ್ದ ಹಂದಿಯನ್ನು ನೋಡಲು ಹೋದಾಗ ಹಂದಿ ನೆಗೆದು ಅದರ ಕೊಂಬಿಗೆ ಬಾಯಮ್ಮನ ಸೀರೆ ಸಿಕ್ಕಿಕೊಂಡು ಉಂಟಾಗುವ ಪಜೀತಿ
ಕಾಡುಹಂದಿಗಾಗಿ ಕರೆಂಟ್ ವಯರ್ ಬಿಟ್ಟು ಅದಕ್ಕೆ ಕೋಣವೊಂದು ಸಿಕ್ಕಿಹಾಕಿಕೊಂಡಿದ್ದ ಪ್ರಸಂಗ
ಪವರ್ ಕಟ್ ಪ್ರಾಬ್ಲಂ : ಐ.ಬಿ. ಘಟನೆ : ಮಂತ್ರಿ ಬರದೇ ಇದ್ದುದು, ಇಂಜಿನಿಯರ್ ಮಲ್ಲಿಕಾರ್ಜುನನಿಗೆ ರೈತಸಂಘದವರ ಕರೆಂಟ್ ಮೋಟಾರ್ ಫೂಟ್‍ವಾಲ್ವ್‍ಗೆ ನೀರು ತುಂಬುವುದು, ಕೆ.ಇ.ಬಿ. ಇಂಜಿನಿಯರ್‍ಗೆ ತಪರಾಕಿ, ಗೊಂದಲಗೇರಿಗೆ ಮಂತ್ರಿ ಬರುವ ಪ್ರಸಂಗ, ಎಂ.ಎಲ್.ಎ. ಮಾತುಕತೆ, ಎಂಎಲ್‍ಎ ಗೆ ಇಂಜಿನಿಯರ್ ಬೆಲೆ ಕೊಡದೆ ನಂತರ ಪ್ರಕಾಶವಾಣಿ ಪ್ರಕಾಶನ ಪ್ರಸಂಗ ಲೇಬರ್ ಲೀಡರ್ ಢೆಲ್ಪಿ ಉತ್ತೇಜನ
ಬಾಬುವನ್ನು ಸೈಕಲ್ ಶಾಪ್ ಜಾನ್ ಬೆಟ್ಟಯ್ಯ ಮತಾಂತರ ಮಾಡುತ್ತಿದ್ದಾನೆ ಎಂದು ಅವನ ಹೆಂಡತಿ ಗಂಗೆ. ಅಣ್ಣಪ್ಪಣನ ಹೆಂಡತಿ, ರುಕ್ಮಿಣೀ, ಮಂಜನ ಅಮ್ಮ ಈರಿ ತೇಜಸ್ವಿ ಬಳಿಗೆ ಬರುವುದು. ಕೊನೆಗೆ ಬಾಬು ಕುಡಿತ ಬಿಡಲು ಔಷದಿ ಕೊಟ್ಟಿದ್ದ
ಊರಳ್ಳಿ ಮತ್ತು ಮಕ್ಕಿಗದ್ದೆಯವರ ನಡುವೆ ನೀರಿನ ಜಟಾಪಟಿ, : ಎಕ್ಸೈಸ್ ಸ್ಕ್ಯಾಡ್‍ನವರು ಎಂಟ್ರಿ.
ಮಕ್ಕಿಗದ್ದೆಯ ನೀರು ಸರಬರಾಜು ಬಾವಿಯಲ್ಲಿ ನೀರು ಖಾಲಿಯಾಗಿ ಮೋಟಾರ್ ಆರ್ಮೇಚರ್ ಪದೇ ಪದೇ ಸುಟ್ಟುಹೋಗುತ್ತಿರುತ್ತದೆ. ಇದಕ್ಕೆ ಕಾರಣ ಊರಳ್ಳಿಯವರು ಹಳ್ಳದ ನೀರನ್ನು ಅಡ್ಡಗಟ್ಟಿ ಮೆಣಸಿನ ತೋಟ ಮಾಡಿರುವುದು ಎಂದು ಮಕ್ಕಿಗದ್ದೆಯವರು ಊರಳ್ಳಿಯವರ ಮೇಲೆ ತಹಸೀಲ್ದಾರ್ ಅವರಿಗೆ ದೂರು ನೀಡುತ್ತಾರೆ. ತಹಸೀಲ್ದಾರ್‍ರವರು ಶೇಕ್‍ದಾರ್ ಸಿದ್ದಪ್ಪನವರಿಗೆ ಪೊಲೀಸ್ ಕರೆದುಕೊಂಡು ಹೋಗಿ ಏನೆಂದ ಸ್ಥಳ ಪರಿಶೀಲನೆ ಮಾಡಿಬರಲು ಹೇಳುತ್ತಾರೆ. ಅವತ್ತು ಪೊಲೀಸ್ ಜೀಪ್ ಕೆಟ್ಟುನಿಂತಿದ್ದರಿಂದ ಎಕ್ಸೈಸ್ ಡಿಪಾರ್ಟ್‍ಮೆಂಟ್ ಜೀಪನ್ನು ಕೇಳುತ್ತಾರೆ. ಎಕ್ಸೈಸ್ ಇಲಾಖೆ ಜೀಪಿನಲ್ಲಿ ಶೇಕದಾರ್ ಸಿದ್ದಪ್ಪ, ಇಬ್ಬರು ಪೊಲೀಸ್ ಪೇದೆಗಳು ಹತ್ತಿದ ಮೇಲೆ ಹಿಂದುಗಡೆ ಸೀಟುಗಳು ಖಾಲಿ ಇದ್ದವೆಂದು ಹತ್ತಿಕೊಂಡ ಎಕ್ಸೈಸ್ ರೈಡಿಂಗ್‍ನ ಖಾಸಾಗಿ ಗೂಂಡಾಗಳು ಏಕಾಏಕಿ ಊರಳ್ಳಿಯವರು ನೆಟ್ಟಿದ್ದ ಮೆಣಸಿನ ಗಿಡಗಳನ್ನು ಕಿತ್ತು ಹಾಕುತ್ತಾರೆ. ಇದು ಮುಂದೆ ದೊಡ್ಡ ಜಟಾಪಟಿಗೆ ಕಾರಣವಾಗಿ ತಾಲ್ಲೂಕಿನಾದ್ಯಂತ ದೊಡ್ಡ ರೈತ ಪ್ರತಿಭಟನೆಗೆ ಕಾರಣವಾಗುತ್ತದೆ.
ಪ್ರಕಾಶವಾಣಿಯಲ್ಲಿ ಬರೆದಿದ್ದ ಸುದ್ದಿ ಮೂರು ದಿನದ ನಂತರ : ಬಸ್‍ಸ್ಟ್ಯಾಂಡ್ ಬೇಕರಿಯಲ್ಲಿ ಕೆ.ಇ.ಬಿ. ಆಪರೇಟರ್ ರಾಮಯ್ಯ, ಲೈನ್ ಮ್ಯಾನ್ ಶರೀಫ ಪ್ರಕಾಶವಾಣಿ ಹರಿದ ಚೂರಿನ ಮೇಲೆ ಕೇಕ್ ಹಾಕಿಕೊಟ್ಟದ್ದು
ಎಕ್ಸೈಸ್ ಗೂಂಡಗಳ ವರ್ತನೆಯಿಂದ ನೊಂದ ಊರಳ್ಳಿ ರೈತರಿಂದ ರೈತ ಸಂಘದ ಶಾಖೆ ಪ್ರಾರಂಭ, ರೈತ ಸಂಘಕ್ಕೆ ದೂರು ರಸ್ತರೋಖೋ ಚಳುವಳಿ, ಗಲಾಟೆ, ಶರಾಬು ಅಂಗಡಿ ಚಿಕ್ವೀರು ಮುನ್ಸಿಪಲಿಟಿ ಮೆಂಬರ್, ಗೂಂಡಾ ಗ್ಯಾಂಗ್, ವಿದ್ಯುತ್ ನೌಕರರು ಪ್ರತಿಭಟನೆಗೆ ದುಡ್ಡು ಕೊಡಲಿಲ್ಲ ಎಂದು ನೀರು ಕಟ್,
ಮಂಜ ಸಂತೆಯಲ್ಲಿ ಸ್ಟುಡಿಯೋ, ಕಟೌಟ್ ಹೀಗೆ ಒಂದೊಂದೆ ಚಿತ್ರಪಟಗಳನ್ನು ಸೃಷ್ಟಿಸಿ ಓದುಗರನ್ನು ಕುತೂಹಲದ ಉತ್ತುಂಗದಲ್ಲಿ ನಿಲ್ಲಿಸುತ್ತದೆ ಮಾಯಾಲೋಕ ಕೃತಿ
ಚಾರ್ಮಾಡಿ ಘಾಟಿಯಿ ಬಾರೀ ಮಳೆ ಗುಡ್ಡ ಕುಸಿತ, ಮಳೆಯ ಮೋಡ ಮೇಳೈಸುತ್ತಿದ್ದ ದೃಶ್ಯ ಕ್ರಮೇಣ ಕಂಡು ಕೇಳರಿಯದ ಮಳೆ ಬೀಳಲು ಪ್ರಾರಂಭ, ಮಳೆ ಸುರಿಯಲು ಪ್ರಾರಂಭಿಸಿದ ಮೇಲೆ ಬೇರೆಲ್ಲಾ ಉಸಬಾರಿಗಳು ನೇಪಥ್ಯಕ್ಕೆ ಸರಿದು ಜನರು ಕೃಷಿ ಕೆಲಸಗಳು, ಮನೆ ಮಾಡು ಸರಿಮಾಡುವುದರೆ ಕಡೆಗೆ ಮುಖಮಾಡುವುದರೊಂದಿಗೆ ಕಾದಂಬರಿ ಕೊನೆಗೊಳ್ಳುತ್ತದೆ.
ಈ ಕೃತಿಯಲ್ಲಿ ಅನೇಕ ಘಟನಾವಳಿಗಳು ಒಂದರ ಒಳಗೊಂಡು ಕಲಸುಮೇಲೊಗರಾಗಿ ಒಟ್ಟಾರೆ ಮಾಯಾಲೋಕವನ್ನೇ ಸೃಷ್ಟಿಸುತ್ತವೆ. ಪ್ರತಿಯೊಂದು ಪ್ರಸಂಗವೂ ಯಾರೂ ಊಹಿಸದೇ ಇದ್ದಂತಹ ನಾಟಕೀಯ ತಿರುವು ಪಡೆದುಕೊಂಡು ಸಮಾಪ್ತಿಯಾಗಿ ಕೊನೆಗೆ ಘಟನೆಯ ಮೂಲ ಎಳೆಯೇ ತಪ್ಪಿ ಹೋಗುವುದನ್ನು ನಾವಿಲ್ಲಿ ಗಮನಿಸಬಹುದು. ಯಾರ ಊಹೆಗೂ ನಿಲುಕದ ರೀತಿಯ ಘಟನಾವಳಿಯೊಂದು ಇಡೀ ಪ್ರಕ್ರಿಯೆಯ ದಿಕ್ಕು ತಪ್ಪಿಸುತ್ತದೆ.
ಒಟ್ಟಾರೆಯಾಗಿ ಮಾಯಾಲೋಕ ಕೃತಿಯನ್ನು ಓದುತ್ತಾ ಹೋದಂತೆ ನಾವು ದಿನನಿತ್ಯದ ಬದುಕಿನಲ್ಲಿ ನಮ್ಮ ಸುತ್ತಮುತ್ತಲ ನಡೆಯುವ ಘಟನಾವಳಿಗಳೇ ಇಲ್ಲಿ ಕಾದಂಬರಿಯ ಪಾತ್ರಗಳಾಗಿ ನಮ್ಮ ಕಣ್ಣಮುಂದೆ ಬರುತ್ತವೆ.
ನಾವು ಮೇಲ್ನೋಟಕ್ಕೆ ನೋಡಿ ಮುಂದೆಸಾಗುವಂತಹ ಸನ್ನಿವೇಶಗಳನ್ನು ತೇಜಸ್ವಿಯವರು ಸೂಕ್ಷ್ಮವಾಗಿ ಗಮನಿಸಿ ಅದನ್ನು ತಮ್ಮ ಕಾದಂಬರಿಯ ಪಾತ್ರದಲ್ಲಿ ಅಳವಡಿಸಿದ್ದಾರೆ. ಅನೇಕ ಬಾರಿ ಸ್ವತಃ ಓದುಗನೇ ಈ ಮಾಯಾಲೋಕದ ಯಾವುದೋ ಒಂದು ಪಾತ್ರದಲ್ಲಿ ತನ್ನನ್ನು ಕಂಡುಕೊಂಡು ಅದರಲ್ಲಿ ತಲ್ಲೀನನಾಗುತ್ತಾನೆ. ಸಮಾಜದ ವಿವಿಧ ಸ್ತರದ ಜನಸಾಮಾನ್ಯರು ತೇಜಸ್ವಿಯವರೊಂದಿಗೆ ಎಂತಹ ಸುಲಭದಲ್ಲಿ ಸಂವಹನ ಸಂಪರ್ಕ ಸಾಧಿಸಿದ್ದರು ಎಂಬುದಕ್ಕೆ ಈ ಕೃತಿಯ ಪಾತ್ರಗಳು ತೇಜಸ್ವಿಯವರೊಡನೆ ಬಹು ಸಹಜವಾಗಿ ವ್ಯವಹರಿಸುವ ಪರಿಯೇ ಸಾಕ್ಷಿ. ಅದರಲ್ಲೂ ಮುಖ್ಯವಾಗಿ ಮೂಡಿಗೆರೆ ಹಾಗೂ ಸುತ್ತಮುತ್ತಲ ಮಲೆನಾಡಿನ ಜನರು ಈ ಕಾದಂಬರಿಯನ್ನು ಓದುತ್ತಾ ಹೋದರೆ ಒಂದಲ್ಲ ಒಂದು ಸನ್ನಿವೇಶವನ್ನು ಸ್ವತಃ ಅವರ ಅನುಭವಕ್ಕೆ ಬಂದವೇ ಆಗಿರುತ್ತವೆ.
ವೈಯುಕ್ತಿಕವಾಗಿ ನಾನಂತು ಈ ಕೃತಿಯನ್ನು ಬಹಳ ಸುಲಭವಾಗಿ ಗ್ರಹಿಸಿಕೊಂಡು ಇದರ ಸ್ವಾದವನ್ನು ತಿಳಿಹಾಸ್ಯವನ್ನು ಅನುಭವಿಸತ್ತಾ ಮನದೊಳಗೆ ನಕ್ಕಿದ್ದೇನೆ. ಕೃತಿಯಲ್ಲಿ ಸೃಷ್ಟಿಸಿರುವ ಪತ್ರಕರ್ತ ಪ್ರಕಾಶನ ಪಾತ್ರ, ಐ.ಬಿ.ಯಲ್ಲಿ ನಡೆಯುವ ರಾಜಕೀಯ ಚಟುವಟಿಕೆಗಳ ಚಿತ್ರಣ ಇವೆಲ್ಲಾ ನಾನೇ ಆ ಪತ್ರಕರ್ತನಾ ಎನ್ನುವಷ್ಟು ತಾದ್ಯಾತ್ಮತೆಯನ್ನು ಅನುಭವಿಸಿದ್ದೇನೆ.
* ಪ್ರಸನ್ನ ಗೌಡಹಳ್ಳಿ
ಸಂಪಾದಕ, ಚಿಕ್ಕಮಗಳೂರು ದರ್ಪಣ
9448555587



